ಧಾರವಾಡ | ಸಿರಿಧಾನ್ಯ ಬೆಳೆಯುವ ರೈತರಿಗೆ ರೈತಸಿರಿ ಯೋಜನೆ: ಜಂಟಿ ಕೃಷಿ ನಿರ್ದೇಶಕ 

Date:

ಧಾರವಾಡ ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸುಮಾರು 800 ರಿಂದ 1,000 ಎಕರೆ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದ್ದು, ಕೃಷಿ ಇಲಾಖೆಯ ರೈತಸಿರಿ ಯೋಜನೆ ಮೂಲಕ ಸಿರಿಧಾನ್ಯ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ ಕಿರಣಕುಮಾರ ಎಂ ಹೇಳಿದರು.

ಕೃಷಿ ಇಲಾಖೆಯಿಂದ ಸಿರಿಧಾನ್ಯಗಳ ಬಳಕೆಯ ಕುರಿತು ಜಾಗೃತಿ ಮೂಡಿಸಲು ಸಿರಿಧಾನ್ಯಗಳ ಜಾಗೃತಿ ವಾಕ್‍ಥಾನ್ (ಜಾಥಾ) ಕಾರ್ಯಕ್ರಮಕ್ಕೆ ಕಲಾಭವನದ ಆವರಣದಲ್ಲಿ ಚಾಲನೆ ನೀಡಿ, ಮಾತನಾಡಿದರು.

“ಸಿರಿ ಧಾನ್ಯಗಳೆಂದರೆ ರಾಗಿ, ಹಾರಕ, ನವಣೆ, ಸಾಮೆ, ಬರಗು, ಕೊರಲೆ ಊದಲು, ಸಜ್ಜೆ ಮತ್ತು ಜೋಳಗಳ ಸಮೂಹ. ಇವುಗಳಿಗೆ ಸುಮಾರು 5 ಸಾವಿರ ವರ್ಷಗಳ ಬೇಸಾಯದ ಇತಿಹಾಸವಿದೆ. ಸಿರಿಧಾನ್ಯಗಳು ಪ್ರಸ್ತುತ ಸನ್ನಿವೇಶದಲ್ಲಿ ಪ್ರಮುಖ ಆಹಾರ ಬೆಳೆಗಳಾಗುತ್ತಿವೆ. ಅತಿ ಕಡಿಮೆ ಮಳೆ ಇರುವ ಪ್ರದೇಶಗಳಲ್ಲಿ, ಶುಷ್ಕ, ಒಣ ಪರಿಸ್ಥಿತಿಗಳಲ್ಲಿ, ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿಯೂ ಬೆಳೆಯಬಹುದಾಗಿದೆ. ಇದಕ್ಕೆ ಕನಿಷ್ಠ ಕೃಷಿ ಪರಿಕರಗಳ ಬಳಕೆ ಆಗುತ್ತದೆ” ಎಂದು  ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನಾರು, ಕಬ್ಬಿಣಾಂಶಗಳು, ಕಾರ್ಬೊಹೈಡ್ರೆಟ್‍ಗಳು ಮತ್ತು ಕೊಬ್ಬಿನಾಂಶಗಳು ಬೇರೆಯ ಧಾನ್ಯಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಇವುಗಳಲ್ಲಿ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್‍ಗಳು ಮತ್ತು ರೋಗ ನಿರೋದಕ ಶಕ್ತಿ ಇರುತ್ತದೆ. ಆದ್ದರಿಂದ ಇವು ಪೌಷ್ಟಿಕತೆಗಳ ಕಣಜಗಳೇ ಆಗಿವೆ. ಆಹಾರ ಕ್ರಮದಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಪಡೆಯಲು ಸಾಧ್ಯವಾಗದ ಜನಸಾಮಾನ್ಯರಿಗೆ ಪೌಷ್ಠಿಕಾಂಶದ ಭದ್ರತೆಯನ್ನು ಇವು ಖಾತರಿಪಡಿಸುತ್ತವೆ” ಎಂದರು.

“ಪೌಷ್ಟಿಕಾಂಶಗಳ ಸಿರಿಯು ಈ ಧಾನ್ಯಗಳಲ್ಲಿ ಹೆಚ್ಚಾಗಿರುವುದರಿಂದ ಸಿರಿಧಾನ್ಯಗಳು ಎಲ್ಲರಿಗೂ ಅಚ್ಚುಮೆಚ್ಚಾಗಿವೆ. ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚಾಗಿ ನಗರವಾಸಿಗಳು ಸಿರಿ ಧಾನ್ಯಗಳನ್ನು ಸ್ವಾಗತಿಸುತ್ತಿದ್ದಾರೆ. ಸಿರಿಧಾನ್ಯಗಳಿಂದ ತಯಾರಿಸಲಾದ ಅಡುಗೆಯ ಜೊತೆಗೆ ಚಕ್ಕುಲಿ, ಹಪ್ಪಳ, ಕೋಡುಬಳೆ, ನಿಪ್ಪಟ್ಟು, ಉಂಡೆ, ಕಜ್ಜಾಯ, ಹೋಳಿಗೆ ಹೀಗೆ ಹಲವು ಸಿಹಿ ಮತ್ತು ಕುರುಕುಲು ತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ” ಎಂದು ಹೇಳಿದರು.

“ರಾಜ್ಯ ಸರ್ಕಾರವು ರಾಜ್ಯದಲ್ಲಿ ಸಿರಿಧಾನ್ಯಗಳ ಬೆಳೆಯನ್ನು ಉತ್ತೇಜಿಸುತ್ತಿದ್ದು, ಹಲವಾರು ಕಾರ್ಯಕ್ರಮಗಳ ಮುಖಾಂತರ ರಾಜ್ಯದಲ್ಲಿ ಸಿರಿಧಾನ್ಯಗಳ ಕ್ಷೇತ್ರವನ್ನು ಹೆಚ್ಚಿಸುವುದರ ಜೊತೆಗೆ ಬೆಳೆದ ಸಿರಿಧಾನ್ಯಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮೇಳಗಳು ಸೇರಿದಂತೆ ಎಲ್ಲ ಹಂತದಲ್ಲಿಯೂ ಸಿರಿಧಾನ್ಯಗಳ ಮೇಳಗಳನ್ನು ಆಯೋಜಿಸುವ ಮೂಲಕ ರೈತರಿಗೆ, ಉದ್ದಿಮೆದಾರರಿಗೆ ಹಾಗೂ ಗ್ರಾಹಕರಿಗೆ ಸಿರಿಧಾನ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ” ಎಂದು ಹೇಳಿದರು.

“ಧಾರವಾಡ ಜಿಲ್ಲೆಯಲ್ಲಿ ಸುಮಾರು 800 ರಿಂದ 1,000 ಎಕರೆ ಕ್ಷೇತ್ರದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಕೃಷಿ ಇಲಾಖೆಯು ಸಿರಿಧಾನ್ಯ ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಇವುಗಳಲ್ಲಿ ರೈತ ಸಿರಿ ಒಂದು ಪ್ರಮುಖ ಯೋಜಯಾಗಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಮುಖವಾಗಿ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದ್ದು, ಈ ಬೆಳೆ ಬೆಳೆದ ರೈತರಿಗೆ ಪ್ರತಿ ಎಕರೆಗೆ ₹10,000ದಂತೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಗರಿಷ್ಠ 2 ಎಕರೆಗೆ ಸೀಮಿತವಾಗುವಂತೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ” ಎಂದು ಹೇಳಿದರು.

ಸಿರಿಧಾನ್ಯಗಳ ಕ್ಷೇತ್ರದಲ್ಲಿ ಸಂಸ್ಕರಣೆಯೇ ಅತಿ ಹೆಚ್ಚು ಸಮಸ್ಯಾತ್ಮಕ ವಿಷಯವಾಗಿದ್ದು, ಸಿರಿಧಾನ್ಯಗಳ ಪ್ರಾಥಮಿಕ ಸಂಸ್ಕರಣ ಘಟಕಗಳ ಸ್ಥಾಪನೆಗಾಗಿ ಪ್ರೋತ್ಸಾಹ ಪಡೆಯಲು ಸಿರಿಧಾನ್ಯ ಬೆಳೆಯುವ ಅರ್ಹ ರೈತರು, ನವೋದ್ಯಮಿಗಳು, ರೈತ ಸಂಘಗಳು, ನೊಂದಾಯಿತ ಸ್ವ-ಸಹಾಯ ಗುಂಪುಗಳು, ರೈತ ಉತ್ಪಾದಕರ ಸಂಸ್ಥೆಗಳು, ಖಾಸಗಿ ಉದ್ದಿಮೆದಾರರು, ಸಾರ್ವಜನಿಕ ವಲಯ ಘಟಕಗಳು, ಜಂಟಿ ವಲಯ ಘಟಕಗಳು ಮತ್ತು ಆಹಾರ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆ ಅಥವಾ ಆಧುನೀಕರಣ ಉದ್ದಿಮೆಯಲ್ಲಿ ಕಾರ್ಯನಿರತರು ಪ್ರತಿ ಘಟಕಕ್ಕೆ ಶೇ.50ರಷ್ಟು ಸಹಾಯಧನ ಅಥವಾ ಗರಿಷ್ಠ ₹10 ಲಕ್ಷದಂತೆ 2 ಕಂತುಗಳಲ್ಲಿ ನೀಡಲಾಗುತ್ತಿದೆ” ಎಂದು ಡಾ ಕಿರಣಕುಮಾರ್ ತಿಳಿಸಿದರು.

“ಸಿರಿಧಾನ್ಯ ಆಧಾರಿತ ಸಿದ್ಧ ಆಹಾರಗಳ ಉತ್ಪನ್ನಗಳ ಸಂಸ್ಕರಣೆ ಘಟಕಗಳನ್ನು ನಿರ್ಮಿಸಲು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಔಪಚಾರೀಕರಣ (ಪಿಎಂಎಫ್‌ಎಂಇ) ಯೋಜನೆಯಡಿ ಶೇ.50 ರಷ್ಟು ಸಹಾಯಧನದಲ್ಲಿ ಗರಿಷ್ಟ ₹15 ಲಕ್ಷ ಸಹಾಯಧನ ನೀಡಲಾಗುತ್ತದೆ” ಎಂದರು.

“ರಾಷ್ಟ್ರೀಯ ಆಹಾರ ಸುರಕ್ಷತೆ ಮಿಷನ್ ಯೋಜನೆಯಡಿ ಸಿರಿಧಾನ್ಯಗಳ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು ಉತ್ತೇಜಿಸಲಾಗುತ್ತಿದೆ. 2023-24 ನೇ ಸಾಲಿನಲ್ಲಿ 2024ರ ಜನವರಿ 5 ರಿಂದ 07ರವರೆಗೆ ಜರುಗುವ ಸಾವಯವ ಮತ್ತು ಸಿರಿಧಾನ್ಯಗಳ ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಅಂಗವಾಗಿ ವಿವಿಧ ಕಾರ್ಯಕ್ರಮಗಳಾದ ಸಿರಿಧಾನ್ಯ ಹಬ್ಬ, ಅರಿವು ಮೂಡಿಸುವ ಕಾರ್ಯಕ್ರಮ, ಸಿರಿಧಾನ್ಯ ರೋಡ್ ಶೋ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಸಿರಿಧಾನ್ಯ ಬೆಳೆಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮಾಹಿತಿ, ಪ್ರಗತಿಪರ ಸಿರಿಧಾನ್ಯ ಬೆಳೆಗಾರರು, ಸಂಸ್ಕರಣಾ ಘಟಕಗಳ ಉತ್ಪಾದಕರು, ಮಾರುಕಟ್ಟೆದಾರರು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ನಿಕಟ ಸಂಪರ್ಕ ಮೂಡಿಸಲು ಅನುಕೂಲವಾಗುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಸ್ ಎಫ್ ಸಿದ್ದನಗೌಡರ ಮಾತನಾಡಿ, “ಸಿರಿಧಾನ್ಯ ಆಹಾರಗಳಿಗೆ ಇಂದು ಬೇಡಿಕೆ ಹೆಚ್ಚಾಗಿದ್ದು, ಆರೋಗ್ಯಕ್ಕಾಗಿ ಸಿರಿಧಾನ್ಯ ಅಡುಗೆಯನ್ನು ಬಳಸಲು ಆಸಕ್ತಿ ವಹಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಸಿರಿಧಾನ್ಯ ಮಾರಾಟಮೇಳ ಮತ್ತು ಉತ್ತಮವಾದ ಒಂದು ಕ್ಯಾಂಟಿನ್ ಸ್ಥಾಪಿಸುವ ಅಗತ್ಯವಿದೆ” ಎಂದು ಹೇಳಿದರು.

ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಚ್ ಬಿ ಬಬಲಾದ ಅವರು ಮಾತನಾಡಿ, “ಸಿರಿಧಾನ್ಯ ಕ್ಷೇತ್ರದಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಸೇರಿದಂತೆ ರೈತರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಸಿರಿಧಾನ್ಯ ಬೆಳೆಯುವ ರೈತನಿಗೆ ಹೆಚ್ಚು ಆರ್ಥಿಕ ಲಾಭವೂ ಆಗುತ್ತಿದೆ. ಆದ್ದರಿಂದ ಸರ್ಕಾರ ಸಾಂಪ್ರದಾಯಿಕ ಬೆಳೆಗಳೊಂದಿಗೆ ಸಿರಿಧಾನ್ಯ ಬೆಳೆಯುವ ಕ್ಷೇತ್ರಗಳ ವಿಸ್ತರಣೆಗೆ ಹೆಚ್ಚು ಆದ್ಯತೆ ನೀಡಬೇಕು” ಎಂದರು.

“ರಾಜ್ಯ ಸರ್ಕಾರವು ಪಡಿತರ ಧಾನ್ಯಗಳೊಂದಿಗೆ ಸಿರಿಧಾನ್ಯವನ್ನು ಸಾರ್ವಜನಿಕರಿಗೆ ವಿತರಿಸಲು ಕ್ರಮ ವಹಿಸಬೇಕು. ರಾಗಿ, ಜೋಳದೊಂದಿಗೆ ಆಸಕ್ತರಿಗೆ ಸಿರಿಧಾನ್ಯಗಳ್ನು ಪಡಿತರ ಅಂಗಡಿಯ ಮೂಲಕ ವಿತರಿಸಲು ಕ್ರಮವಹಿಸಬೇಕು. ಇದರಿಂದ ರೈತರಿಗೆ ಆರ್ಥಿಕ ಅನುಕೂಲ ಮತ್ತು ಜನರ ಉತ್ತಮ ಆರೋಗ್ಯಕ್ಕೆ ಸಹಾಯವಾಗುತ್ತದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಕ್ರಮವಹಿಸಿ; ಜಿಲ್ಲಾಧಿಕಾರಿ ಸೂಚನೆ

ಹುಬ್ಬಳ್ಳಿಯ ಉಪನಿರ್ದೇಶಕ ಸಂದೀಪ್ ಆರ್ ಜಿ, ಸಹಾಯಕ ನಿರ್ದೇಶಕರುಗಳಾದ ಎಸ್ ಎಫ್ ಕಟ್ಟೆಗೌಡರ್, ಸುಷ್ಮಾ ಮಳಿಮಠ, ತಿಪ್ಪೇಸ್ವಾಮಿ, ಭಾರತಿ ಮೆಣಸಿನಕಾಯಿ ಹಾಗೂ ಕೇಂದ್ರ ಕಚೇರಿಯ ಸಹಾಯಕ ನಿರ್ದೇಶಕಿ ಗೀತಾ ಕಡಪಟ್ಟಿ, ಕೃಷಿ ಇಲಾಖೆಯ ಅಧಿಕಾರಿಗಳಾದ ಮಂಜುನಾಥ ಹೂಗಾರ, ವಿಜಯಕುಮಾರ ಹಾಲಗತ್ತಿ, ಮಹಾದೇವ ಸರಶೆಟ್ಟಿ, ಸರ್ಕಾರಿ ನೌಕರ ಸಂಘದ ಆರ್ ಎಂ ಹೊನ್ನಪ್ಪನವರ, ನಿವೃತ್ತ ನೌಕರ ಸಂಘದ ಎಸ್ ಕೆ ರಾಮದುರ್ಗ, ಕೃಷಿ ಪರಿಕರ ಮಾರಾಟಗಾರರು, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಕೃಷಿ ತಂತ್ರಜ್ಞಾನ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಜಾಥಾ ಕಾರ್ಯಕ್ರಮದಲ್ಲಿ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೇಸಿಗೆಯಲ್ಲಿ ಉದ್ಯಾನವನಗಳನ್ನು ಹಸಿರಾಗಿಡಲು ಸಂಸ್ಕರಿಸಿದ ನೀರುಣಿಸಲು ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯಲು ನೀರಿಲ್ಲದೇ ಜನ ಪರಡಾಡುವಂತಾಗಿದೆ. ಜತೆಗೆ, ಮರಗಿಡಗಳು...

ಉಡುಪಿ | ಮನೆಯಲ್ಲಿ ಒಂಟಿಯಾಗಿದ್ದ ಯುವಕನನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

ಮನೆಯಲ್ಲಿ ಒಂಟಿಯಾಗಿದ್ದ ಯುವಕನನ್ನು ಪಿಸ್ತೂಲಿನಿಂದ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉಡುಪಿ ಜಿಲ್ಲೆಯ...

ʼಈದಿನ.ಕಾಮ್ʼ ನ್ಯೂಸ್ ಬೀದರ್ ಸಹಾಯವಾಣಿ ಬಿಡುಗಡೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ

ಕಲುಷಿತವಾದ ವಾತಾವರಣದಲ್ಲಿ ಸಮಾಜದ ಉನ್ನತಿಗಾಗಿ ವಸ್ತುನಿಷ್ಠ, ಪ್ರಾಮಾಣಿಕತೆ, ದಕ್ಷತೆ ಹಾಗೂ ನಿರ್ಭಡೆಯಿಂದ...

ದಾವಣಗೆರೆ | ನಾಲೆಯ ಕೊನೆ ಭಾಗಕ್ಕೆ ನೀರು ಹರಿದಿಲ್ಲ; ಸಚಿವರು ರೈತರ ಹಿತ ಕಾಯುತ್ತಿಲ್ಲ: ಶಾಸಕ ಹರೀಶ್

ದಾವಣಗೆರೆ ಜಿಲ್ಲೆಯ ರೈತರಿಗೆ ಭದ್ರಾ ಜಲಾಶಯದಿಂದ ಸಮರ್ಪಕವಾಗಿ ನೀರು ಹರಿಸುವಲ್ಲಿ ಜಿಲ್ಲಾ...