ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗೊಬ್ಬುರ ಹೋಬಳಿ ವ್ಯಾಪ್ತಿಯ ಕಾಕರಗಲ್ ಬಳಿಯಿರುವ ಟೋಲ್‌ಗೇಟ್ ತೆರವುಗೊಳಿಸಲು ಒತ್ತಾಯಿಸಿ ಕರ್ನಾಟಕ ರೈತ ಸಂಘಟನೆ ಪ್ರತಿಭಟನೆ ನಡೆಸಿತು.
ಕಲ್ಮಲ್‌ನಿಂದ ತಿಂಥಣಿ ಬ್ರಿಡ್ಜ್ ವರೆಗಿನ ರಾಜ್ಯ ಹೆದ್ದಾರಿವರೆಗೆ ಅವಜ್ಞಾನಿಕವಾಗಿ ಟೋಲ್‌ಗೇಟ್ ನಿರ್ಮಾಣ ಮಾಡಿ ಹಣ ವಸೂಲಿ ಮಾಡುತ್ತಿರುವುದು ಸರಿಯಲ್ಲ. ಕಲ್ಮಲ್ ಮತ್ತು ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಗೆ ಒಳಪಟ್ಟರೂ ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕಾರ್ಖಾನೆಗಳಾಗಲಿ, ವಾಣಿಜ್ಯ ವ್ಯಾಪಾರಗಳಲೀ ನಡೆಯುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಜನ ಪ್ರತಿನಿಧಿಗಳು 2010ರಲ್ಲಿ 192 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದ್ದ ಅದೇ ರಸ್ತೆಗೆ ಕೆಆರ್‌ಡಿಸಿಎಲ್ ನಿಂದ 70 ಕೋಟಿ ವೆಚ್ಚದಲ್ಲಿ ಪ್ಯಾಚ್ ವರ್ಕ್ ಡಾಂಬರೀಕರಣ ಮಾಡಿದ್ದಾರೆ. ಈ ಸಮಸ್ಯೆಗಳನ್ನು ಬಗರೆಹರಿಸುವುದು ಬಿಟ್ಟು ಟೋಲ್ ನಿರ್ಮಿಸಿ ಸಾಮಾನ್ಯ ಜನರಿಂದ ಹಣ ಪೀಕುತ್ತಿದ್ದಾರೆ” ಎಂದು ಸಂಘಟನೆಯ ಸದಸ್ಯರು, ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
“ಜಿಲ್ಲೆಯ ಅತ್ಯಂತ ಹಿಂದುಳಿದ ದೇವದುರ್ಗ ತಾಲೂಕಿನಲ್ಲಿ ಶೇ. 80 ರಷ್ಟು ರೈತರು, ಕೂಲಿ ಕಾರ್ಮಿಕರು ದಿನ ನಿತ್ಯ ಹೊಲದ ಕೆಲಸಗಳಿಗೆ ಎಣ್ಣೆ ಗೊಬ್ಬರ ಹಾಗೂ ಇತರೆ ಸಾಮಗ್ರಿ ತರಲು, ಧವಸ ಧಾನ್ಯ ಮಾರಾಟ ಮಾಡಲು, ಎತ್ತು, ಹಸು, ಕುರಿ, ಖರೀದಿಸಲು, ಮಾರಾಟ ಮಾಡಲು ಗ್ರಾಮೀಣ ಪ್ರದೇಶದಿಂದ ಪಕ್ಕದ ದೇವದುರ್ಗಕ್ಕೆ ಓಡಾಡುತ್ತಾರೆ. ಅದಕ್ಕೂ ಟೋಲ್ ಕಟ್ಟಬೇಕು. ಕೂಡಲೇ ಈ ನಡೆಯಿಂದ ಹಿಂದೆ ಸರಿಯಬೇಕು. ಸಂಬಂಧಪಟ್ಟ ಇಲಾಖೆ, ಆಡಳಿತ ವರ್ಗ ಅಧಿಕಾರಿಗಳು ಟೋಲ್‌ಗೇಟ್ ತೆರವಿಗೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ರಾಯಚೂರು | ಮೂಲ ಸೌಕರ್ಯ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಈ ವೇಳೆ ಮಲ್ಲಯ್ಯ ಕಟ್ಟಿಮನಿ, ಕೆ.ಗಿರಿಲಿಂಗ ಸ್ವಾಮಿ, ರಮೇಶ ಮರಗಣ್ಣ ಇರಬಗೇರಾ, ಸಿದ್ದಲಿಂಗಪ್ಪ, ಬಾಬು ದುಬೈ, ಮಲ್ಲೇಶ್ ಇನ್ನಿತರರು ಇದ್ದರು.
