ದೇವದುರ್ಗ ಜಾನಪದ ವೈಭವದ ಅಂಗವಾಗಿ ಹಟ್ಟಿ ಪಟ್ಟಣದ ಹಿರಿಯ ಜಾನಪದ, ಬುರ್ರಕಥಾ ಕಲಾವಿದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಖ್ಯಾತಿಯ ಸಾಧಕಿ ಬುರ್ರಕಥಾ ಕಮಲಮ್ಮನವರಿಗೆ ಅಭಿನಂದಿಸಿ, ವಿಶೇಷ ಗೌರವದೊಂದಿಗೆ ಸನ್ಮಾನ ಮಾಡಲಾಯಿತು ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ. ಶರಣಪ್ಪ ಆನೆಹೊಸೂರು ಹರ್ಷ ವ್ಯಕ್ತಪಡಿಸಿದರು.
ಯುನೆಸ್ಕೊ ಮಾನ್ಯತೆ ಪಡೆದ ಸಂಸ್ಥೆ ನಾಡೋಜ ಡಾ. ಎಚ್ ಎಲ್ ನಾಗೇಗೌಡ ಸ್ಥಾಪಿತ ಕರ್ನಾಟಕ ಜಾನಪದ ಪರಿಷತ್ ರಾಯಚೂರು ಜಿಲ್ಲಾ ಘಟಕದಿಂದ ದೇವದುರ್ಗದ ಖೇಣೇದ್ ಮುರಿಗೆಪ್ಪ ಮಹಾವಿದ್ಯಾಲಯದ ಆವರಣದಲ್ಲಿ ಪ್ರಕಾಶ ಖೇಣೇದ್ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಿಸಿದ ಎರಡನೇ ಜಾನಪದ ಸಮ್ಮೇಳನದಲ್ಲಿ ಮಾತನಾಡಿದರು.
“ರಾಯಚೂರು ಜಿಲ್ಲೆಯ ಹಟ್ಟಿ ಪಟ್ಟಣದ ಖ್ಯಾತ ಬುರ್ರಕಥಾ ಕಮಲಮ್ಮ ಅವರ ಅಪರೂಪದ ಜನಪದ ಕಲೆ ಮತ್ತು ಸೇವೆಯನ್ನು ಗುರುತಿಸಿ ಈ ಮೊದಲು ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ರಾಜ್ಯ ಘಟಕ ಹಾಗೂ ಲಿಂಗಸೂಗೂರು ತಾಲೂಕು ಘಟಕದಿಂದ 2021ರ ಏಪ್ರಿಲ್ 03ರಂದು ಜಾನಪದ ಸಿರಿ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕರ್ನಾಟಕ ಸರ್ಕಾರವು 2022ರಲ್ಲಿ ಜಾನಪದ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು” ಎಂದು ಹೇಳಿದರು.
“ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದ ಬುರ್ರಕಥಾ ಖ್ಯಾತಿಯ ಈ ಕಮಲಮ್ಮನವರು ಬಹಳಷ್ಟು ಲೆಕ್ಕವಿಲ್ಲದಷ್ಟು ಜನಪದ, ಸೋಬಾನೆ ಪದ, ಜೋಗುಳ ಪದ, ಬೀಸುವ ಪದ, ಕುಟ್ಟುವ ಪದ, ತೊಟ್ಟಿಲು ಪದ, ಸೀಮಂತ ಕಾರ್ಯಕ್ರಮ, ಹಬ್ಬ-ಹುಣ್ಣಿಮೆಗಳಲ್ಲಿ ಹತ್ತಿ ಬಿಡಿಸುವಾಗಿನ ಪದಗಳು, ಬಿತ್ತನೆ ಸಂದರ್ಭದ ಪದ, ಮದುವೆಯ ಅರಿಶಿಣದ ಪದ, ಮೈನೆರೆದಾಗ ಕರೆದ್ರೆ ಅಲ್ಲೂ ಸಹ ಸಾಕಷ್ಟು ಹಾಡುಗಳನ್ನು ಹಾಡುತ್ತ ಹಾಗೂ ಪರಂಪರಾಗತ ಹಾಡುಗಳ ಜತೆಗೆ ಬುರ್ರಕಥೆಗಳನ್ನು ಹೇಳುತ್ತಾರೆ” ಎಂದರು.
“ಪ್ರಮುಖವಾಗಿ ಇವರು ಹಾಡುವ ಬುರ್ರಕಥೆಗಳೆಂದರೆ- ಬಾಲನಾಗಮ್ಮನ ಕಥೆ, ಏಳು ಮಕ್ಕಳ ತಾಯಿ ಭೂಲಕ್ಷ್ಮೀ ಕಥೆ, ಶರಬಂಧರಾಜ ಕಥೆ, ಬಾಲರಾಜ ಕಥೆ, ಚಿತ್ರಶೇಖರ-ಸೋಮಶೇಖರ ಕಥೆ, ಲಕ್ಷಪತಿರಾಜ ಕಥೆ, ಆದೋನಿ ತಿಕ್ಕಲಕ್ಷಮ್ಮ ಕಥೆ, ಸವಾರೆಮ್ಮ ಕಥೆ, ಹೇಮರೆಡ್ಡಿ ಮಲ್ಲಮ್ಮ ಕಥೆ, ಬಳ್ಳಾರಿ ಕೂಸಲಿಂಗ ಕಥೆ, ಕುಮಾರಸ್ವಾಮಿ ಕಥೆ ಇತ್ಯಾದಿ ಬುರ್ರಕಥಾಗಳನ್ನು ಹಾಡುತ್ತಾರೆ. ಈ ಅದ್ಭುತ ಕಲಾವಿದೆಯ ಜನಪದ ಹಾಡುಗಳು, ಕಾವ್ಯಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆಗಳು ಇವುಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಕಸಾಪ ಯುವ ಜನಾಂಗವನ್ನು ಹೆಚ್ಚು ಗಮನ ಸೆಳೆಯಬೇಕು: ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ
ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷ ಪ್ರಕಾಶ ಖೇಣೇದ್, ಕ.ಜಾ.ಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ, ಕ.ಜಾ.ಪ ತಾಲೂಕಧ್ಯಕ್ಷ ಬಸವರಾಜ ಯಾಟಗಲ್, ಶ್ರೀದೇವಿ ಆರ್ ನಾಯಕ್, ಡಾ. ಅರುಣಾ ಹಿರೇಮಠ ಮಹಿಳಾ ಘಟಕದ ಜಿಲ್ಲಾಧ್ಯಕ್ಷರು, ರವಿ ರಾಯಚೂರಕರ್, ಅಭಿಷೇಕ ಬಳೆ ಮಸರಕಲ್ ಹಾಗೂ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಇದ್ದರು.