ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದ ಬಳಿಕ ಘಟನೆ ನಡೆದಿದ್ದು, ಘಟನೆಯ ಬಳಿಕ ಕಾರ್ಮಿಕ ಮಹಿಳೆಯರನ್ನು ವಾಹನದಲ್ಲೇ ಬಿಟ್ಟು ಚಾಲಕ ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ದೇವದುರ್ಗ ತಾಲೂಕಿನ ಜಾಡಲದಿನ್ನಿ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ಘಟನೆಯು ಮಂಗಳವಾರ ಬೆಳಕಿಗೆ ಬಂದಿದೆ. ತಾಲೂಕಿನ ಜಾಡಲದಿನ್ನಿ ಗ್ರಾಮ ಸೇರಿ ಸುತ್ತಮುತ್ತಲಿನ ಗ್ರಾಮದ ಕೂಲಿಕಾರರನ್ನು ಸಾಗಿಸುತ್ತಿದ್ದ ಟಾಟಾ ಏಸ್ ಜಾಡಲದಿನ್ನಿ ಗ್ರಾಮದ ಬಳಿಯ ತುಂಗಭದ್ರಾ ಎಡದಂಡೆ ನಾಲೆಯ ಮುಖ್ಯ ಕಾಲುವೆಗೆ ಇಳಿದಿದೆ.
ಕೆನಾಲ್ ಬಳಿಯ ಕಚ್ಚಾ ರಸ್ತೆಯಿಂದ ಸಂಚರಿಸುತ್ತಿದ್ದ ವಾಹನವು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಜಾರಿದೆ. ಕಾಲುವೆಗೆ ವಾಹನ ಬಿದ್ದ ಬಳಿಕ, ಚಾಲಕ ಗಾಡಿ ಆಫ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ನಡು ನೀರಿನಲ್ಲೇ ನಿಂತ ಟಾಟಾ ಏಸ್‌ನಲ್ಲಿದ್ದ ಮಹಿಳೆಯರು, ಗಾಬರಿಯಾಗಿ ಚೀರಾಡಿದ್ದಾರೆ. ಮಹಿಳೆಯರ ಶಬ್ದ ಕೇಳಿ ರಸ್ತೆಯಿಂದ ಹೋಗುತ್ತಿದ್ದ ಸ್ಥಳೀಯರು ಹಗ್ಗದ ಸಹಾಯದಿಂದ ಕೂಲಿ ಕಾರ್ಮಿಕ ಮಹಿಳೆಯರನ್ನು ರಕ್ಷಿಸಿದ್ದಾರೆ.
ಟಾಟಾ ಎಸ್ ನಲ್ಲಿ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಟಾಟಾ ಏಸ್ ಜಾರಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಡಲದಿನ್ನಿ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಚಾಲಕ ಗಾಡಿ ಆಫ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. pic.twitter.com/v48rbjaVwz
— eedina.com ಈ ದಿನ.ಕಾಮ್ (@eedinanews) November 19, 2024
ಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಮಹಿಳೆಯರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ. ಮಹಿಳೆಯರು ಸಿರವಾರ ತಾಲ್ಲೂಕಿನ ಜಂಬಲದಿನ್ನಿ ಗ್ರಾಮಸ್ಥರು ಎಂದು ಹೇಳಲಾಗಿದೆ.
ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಈ ಬಗ್ಗೆ ದೇವದುರ್ಗ ಪೊಲೀಸರಿಗೆ ಕೇಳಿದರೆ ಮಾಹಿತಿ ಇಲ್ಲ ಎಂದು ಹೇಳಿದ್ದು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ಮೀನು ಹಿಡಿಯಲು ಹೋಗಿದ್ದ ತಂದೆ ಮಕ್ಕಳು ನೀರುಪಾಲು: ಮೂವರ ಪೈಕಿ ಇಬ್ಬರ ಶವ ಪತ್ತೆ
ಘಟನೆಯ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಚಾಲಕನ ಹಾಗೂ ಸ್ಥಳೀಯ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಗೂಡ್ಸ್ ವಾಹನಗಳಲ್ಲಿ ಹತ್ತಿಬಿಡಿಸಲು ಕೃಷಿ ಕಾರ್ಮಿಕರನ್ನು ದನಕರುಗಳಂತೆ ಸಾಗಿಸುತ್ತಿದ್ದು, ಪೊಲೀಸ್ ಇಲಾಖೆ ಮೌನ ವಹಿಸಿದೆ. ಇನ್ನಾದರೂ, ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರನ್ನು, ಕೂಲಿ ಕಾರ್ಮಿಕರನ್ನು ಸಾಗಿಸುವುದನ್ನು ತಡೆಗಟ್ಟಿ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
