ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಸೇರಿದಂತೆ ಪ್ರಮಖ ಮೂರು ಬೇಡಿಕೆಗಳಿಗೆ ರಾಜ್ಯ ಸರ್ಕಾರ ಗಮನ ಸೆಳೆಯಲು ಹೋರಾಟ ಸೇರಿದಂತೆ ಹಲವು ಹಂತದಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಣ ಸಮಿತಿ ನಿರ್ಧರಿಸಿದೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯಕ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಏಳನೇ ವೇತನ ಆಯೋಗ ಜಾರಿಗೊಳಿಸಲು ಎರಡು ಬಾರಿ ಅವಧಿಯನ್ನು ವಿಸ್ತರಿಸಲಾಗಿದೆ. 13 ತಿಂಗಳಾದರೂ ಆಯೋಗ ವರದಿ ನೀಡಿಲ್ಲ. ಕೂಡಲೇ ಜಾರಿಗೆ ರಾಜ್ಯ ಸರ್ಕಾರ ಮುಂದಾಗಬೇಕು” ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ ಮಾತನಾಡಿ, “ಮಂಡ್ಯದಲ್ಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಏಳನೇ ವೇತನ ಆಯೋಗ ಜಾರಿಗೊಳಿಸಲು ಸರ್ಕಾರಕ್ಕೆ ಮನವಿ ನೀಡಿ ಎಲ್ಲ ಶಾಸಕರುಗಳು, ವಿಧಾನಪರಿಷತ್ ಸದಸ್ಯರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ” ಎಂದರು.
“ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಆರನೇ ವೇತನ ಆಯೋಗ ರಚಿಸಿ 8 ತಿಂಗಳಲ್ಲಿ ಅಲ್ಪಾವಧಿ ವರದಿ ಪಡೆದು ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಸೇರಿ ಅನೇಕ ಅನುಕೂಲ ಮಾಡಿಕೊಟ್ಟಿದ್ದರು. ಈಗಲೂ ಅವರೇ ಮುಖ್ಯಮಂತ್ರಿಯಾಗಿದ್ದು, ಏಳನೇ ವೇತನ ಆಯೋಗಕ್ಕೆ ಎರಡು ಬಾರಿ ಅವಧಿ ವಿಸ್ತರಣೆ ಮಾಡುತ್ತಿರುವುದು ವಿಳಂಬ ಧೋರಣೆಯಾಗಿದೆ. ಹಳೆ ಪಿಂಚಣಿ ಜಾರಿಗೊಳಿಸಲು ಅಪರ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದರೂ ಯಾವುದೇ ವರದಿ ನೀಡಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ತಿಪ್ಪೆಗಳಾಗಿದ್ದ ಕೆರೆಗಳಿಗೆ ಜೀವ ಕಳೆ ತುಂಬಿದ ಸ್ಥಳೀಯರು
“ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ 3 ಲಕ್ಷ ಮಂದಿ ನೌಕರರಿಗೆ ಇರುವ ಆತಂಕ ದೂರ ಮಾಡಲು ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಬೇಕು. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ವ್ಯಾಪ್ತಿಗೆ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ವರ್ಗದವರಿಗೆ ನಗದು ರಹಿತ ಚಿಕಿತ್ಸೆ ಒದಗಿಸಲು ಆದೇಶ ನೀಡಲಾಗಿದೆಯಾದರೂ ಜಾರಿಗೊಂಡಿಲ್ಲ. ಸರ್ಕಾರ ಕೂಡಲೇ ಜಾರಿಗೆ ಮುಂದಾಗಬೇಕು. ಕಾಲಕಾಲಕ್ಕೆ ವೇತನ ಭತ್ಯೆಗಳನ್ನು ಪರಿಷ್ಕರಣೆ ಮಾಡಬೇಕು. ಸರ್ಕಾರ 21 ದಿನಗಳ ಗಡುವಿನಲ್ಲಿ ಜಾರಿಗೆ ಮುಂದಾಗದೇ ಹೋದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಹೀರೆಮಠ, ಹನುಮಂತರಾಯ ಶಾಖೆ, ಅಯ್ಯನಗೌಡ ಐರೆಡ್ಡಿ, ಶ್ರೀಶೈಲಗೌಡ ಮಾನವಿ, ಭರತಕುಮಾರ, ಶರಣಪ್ಪ, ಲಿಂಗಪ್ಪ ಇದ್ದರು.
ವರದಿ : ಹಫೀಜುಲ್ಲ