ರಾಯಚೂರು ಜಿಲ್ಲೆಯ ಕುರುಬರ ದೊಡ್ಡಿ ಕಿರಿಯ ಪ್ರಾಥಮಿಕ ಶಾಲೆಗೆ ಸುಮಾರು ವರ್ಷಗಳಿಂದ ವಿದ್ಯುತ್ ವ್ಯವಸ್ಥೆಯಿಲ್ಲ. ಇದರಿಂದ ಕೊಠಡಿಗಳು ಕತ್ತಲೆ ಕೋಣೆಗಳಾಗಿ ಮಾರ್ಪಟ್ಟಿದ್ದು, ವಿದ್ಯಾರ್ಥಿಗಳು ಡಿಜಿಟಲ್ ತರಗತಿಗಳಿಂದ ವಂಚಿತರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಗಲಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಶಾಲೆಯಲ್ಲಿ ವಿದ್ಯುತ್ ಇಲ್ಲದೆ ಮಕ್ಕಳು ಕತ್ತಲೆಯಲ್ಲಿ ಪಾಠ ಕೇಳುವಂತಾಗಿದೆ. ಶಾಲೆಯಲ್ಲಿ 50ಕ್ಕಿಂತ ಅಧಿಕ ಮಂದಿ ಮಕ್ಕಳಿದ್ದಾರೆ. ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ವಿದ್ಯುತ್ ಸಂಪರ್ಕದ ಅವಶ್ಯಕತೆಯಿದೆ. ಬಿಸಿಯೂಟ ತಯಾರಿಸಲು, ಕುಡಿಯುವ ನೀರಿಗೆ ಹಾಗೂ ಡಿಜಿಟಲ್ ತರಗತಿಗಳಿಗೆ ವಿದ್ಯುತ್ ಅತ್ಯವಶ್ಯಕವಿದೆ. ವಿದ್ಯಾರ್ಥಿಗಳಿಗೆ ಶೌಚಾಲಯ ಬಳಕೆ ಮಾಡಲು ಹಾಗೂ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಲು ವಿದ್ಯುತ್ ಸಂಪರ್ಕ ಬೇಕಾಗಿದೆ. ಎಲ್ಲ ಸರ್ಕಾರಿ ಶಾಲೆಗೆ ಡಿಜಿಟಲ್ ಕ್ಲಾಸ್ ನಡೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಉಚಿತ ವಿದ್ಯುತ್ ಆದೇಶ ಹೊರಡಿಸಿದ್ದಾರೆ.

“ಡಿಜಿಟಲ್ ಕ್ಲಾಸ್ ಇದ್ದರೆ ನಮ್ಮ ವಿದ್ಯಾರ್ಥಿಗಳು ತಲ್ಲೀನಗೊಳಿಸುವ ವಾತಾವರಣದಲ್ಲಿ ಕಲಿಯುತ್ತಾರೆ. ಇದು ಅವರ ಆಸಕ್ತಿ ಮತ್ತು ಜ್ಞಾನದ ಧಾರಣೆಯನ್ನು ಹೆಚ್ಚಿಸುತ್ತದೆ” ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಸ್ಥಳೀಯ ನಿವಾಸಿ ಶಿವನಗೌಡ ಮಾತನಾಡಿ, “ಶಾಲೆ ಪ್ರಾರಂಭಗೊಂಡು ಹಲವು ವರ್ಷಗಳು ಕಳೆದಿವೆ. ಆದರೆ ಈವರೆಗೂ ವಿದ್ಯುತ್ ಇಲ್ಲದೆ, ಮಕ್ಕಳು ಕತ್ತಲೆಯಲ್ಲೇ ಪಾಠ ಕೇಳುವಂತಾಗಿದೆ. ಎಲ್ಲ ಶಾಲೆಗೆ ಡಿಜಿಟಲ್ ಕ್ಲಾಸ್ ವ್ಯವಸ್ಥೆಯಾಗಬೇಕೆಂದು ಹೇಳುತ್ತಾರೆ. ಆದರೆ ಇಲ್ಲಿ ವಿದ್ಯುತ್ ಇಲ್ಲದೆ ಮಕ್ಕಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ” ಎಂದರು.

“ನಮ್ಮ ದೇಶ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಎಂದು ಮುಂದುವರೆಯುತ್ತಿದ್ದರೆ ಇಲ್ಲಿ ಓದುತ್ತಿರುವ ಮಕ್ಕಳಿಗೆ ವಿದ್ಯುತ್ ಭಾಗ್ಯ ಇಲ್ಲವಾಗಿದೆ. ಶಾಲೆಗಳಲ್ಲಿ ಸೌಕರ್ಯವಿಲ್ಲದೇ ಪೋಷಕರು ಖಾಸಗಿ ಶಾಲೆಗೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಬಂದ್ ಆಗುತ್ತಿವೆ, ಸರ್ಕಾರ ಪ್ರತಿ ಖಾಸಗಿ ಶಾಲೆಗೆ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಹೊರಟಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ರೈತರು ಎಣ್ಣೆಕಾಳು ಬೆಳೆಗಳ ಉತ್ಪಾದನೆ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕು: ಜಂಟಿಕೃಷಿ ನಿರ್ದೇಶಕಿ ರೂಪಾ ಎಲ್
ಶಾಲೆಯ ಅತಿಥಿ ಶಿಕ್ಷಕ ಬಸವರಾಜ್ ಸುಣ್ಣದಕಲ್ ಮಾತನಾಡಿ, “ಶಾಲೆಯಲ್ಲಿ ಮೂರು ಕೋಣೆಗಳಿವೆ, ಶಾಲೆಯಲ್ಲಿ ವಿದ್ಯುತ್ ಇಲ್ಲದೆ ಮಕ್ಕಳು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಶಾಲೆಯಲ್ಲಿ ಯಾವುದಾದರೂ ಚಟುವಟಿಕೆ, ಕಾರ್ಯಕ್ರಮಗಳನ್ನು ಮಾಡಬೇಕಾದರೆ ವಿದ್ಯುತ್ ಇಲ್ಲದೆ ಯಾವುದೂ ಸಾಧ್ಯವಾಗುತ್ತಿಲ್ಲ, ಮಕ್ಕಳು ಹೀಗೇ ಹಿಂದೆ ಉಳಿಯುತ್ತಿದ್ದಾರೆ” ಎಂದರು.
“ಸಣ್ಣಪುಟ್ಟ ಹಳ್ಳಿಗಳಲ್ಲಿ ಬಡ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಾರೆ. ಖಾಸಗಿ ಶಾಲೆಗೆ ಹೋಗಲು ಸಂಕಷ್ಟ ಇರುವುದರಿಂದ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾತಿ ಮಾಡಿಸುತ್ತಾರೆ. ಆದರೆ ಸರಿಯಾಗಿ ಮೂಲ ಸೌಕರ್ಯವಿಲ್ಲದಿದ್ದರೆ ನಾಳೆಯ ದಿನಗಳು ಸರ್ಕಾರಿ ಶಾಲೆಗಳು ಶೂನ್ಯ ಶಾಲೆಗಳಾಗಿ ಮಾರ್ಪಾಡಾಗುತ್ತವೆ. ಇಂದಿನ ಶಾಲಾ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದು ದೊಡ್ಡ ಕಳವಳವಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಸರ್ಕಾರಿ ಶಾಲೆಗೆ ಅಭಿವೃದ್ಧಿಪಡಿಸಬೇಕು” ಎಂದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್