ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಆದರ್ಶ ಗ್ರಾಮ ಮಾಡಬೇಕೆಂದು ಆಶಿಸಿ ಸಂಸತ್ ಸದಸ್ಯರು ತಮ್ಮ ಆಯ್ಕೆಯ ಗ್ರಾಮ ಪಂಚಾಯಿತಿವೊಂದನ್ನು ದತ್ತು ಪಡೆದುಕೊಂಡು ಸಂಪೂರ್ಣವಾಗಿ ಅಭಿವೃದ್ಧಿ ಮಾಡಬೇಕೆಂಬುದು ಸರ್ಕಾರದ ನಿಯಮ. ಆದರೆ ದೇವದುರ್ಗ ತಾಲೂಕಿನ ಹೊನ್ನಟಗಿ ಗ್ರಾಮವು ಹೆಸರಿಗೆ ಮಾತ್ರ ಆದರ್ಶ ಗ್ರಾಮ, ಅಭಿವೃದ್ಧಿಯಲ್ಲಿ ಶೂನ್ಯ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದರು.
“ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೇಮನಾಳ ಪಂಚಾಯಿತಿ ವ್ಯಾಪ್ತಿಗೆ ಬರುವ ಹೊನ್ನಟಗಿ ಗ್ರಾಮ ಕೇವಲ ಸರ್ಕಾರದ ಪಟ್ಟಿಯಲ್ಲಿ ಮಾತ್ರ ಆದರ್ಶ ಗ್ರಾಮ. ಆದರೆ ಸಂಪೂರ್ಣ ಮೂಲಸೌಕರ್ಯಗಳಿಂದ ವಂಚಿತಗೊಂಡಿದ್ದು, ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಹೆಸರಿಗೆ ಮಾತ್ರ ಆದರ್ಶ” ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿ ಶಾಂತಕುಮಾರ ಹೊನ್ನಟಗಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹೇಮನಾಳ ಪಂಚಾಯಿತಿ ವ್ಯಾಪ್ತಿಗೆ ಬರುವ ಹೊನ್ನಟಗಿ ಗ್ರಾಮ ಸರ್ಕಾರದ ಪಟ್ಟಿಯಲ್ಲಿ 2019/20ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮವೆಂದು ಆಯ್ಕೆಯಾದರೂ ಸಹಿತ ಪ್ರಸ್ತುತದವರೆಗೆ ರಸ್ತೆ, ಚರಂಡಿ, ಶುದ್ದ ಕುಡಿಯುವ ನೀರು, ಮಹಿಳಾ ಶೌಚಾಲಯ, ಅಂಗನವಾಡಿ, ಶಾಲೆ, ಪ್ರಾಥಮಿಕ ಶಾಲೆ, ಜನಸಾಮಾನ್ಯರು, ಮಕ್ಕಳು ಬಹಳ ಉತ್ತಮವಾದ ವಾತಾವರಣದಲ್ಲಿ ಜೀವಿಸಲು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಆದರ್ಶ ಗ್ರಾಮವಾಗಬೇಕಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಸ್ತವ್ಯಸ್ತಕ್ಕೆ ಕಾರಣವಾಗಿದೆ” ಎಂದು ದೂರಿದರು.
“ಗ್ರಾಮದಲ್ಲಿರುವ ಅನೈರ್ಮಲ್ಯವನ್ನು ಶುಚಿಗೊಳಿಸಿಕೊಡುವಂತೆ ಅಪರ ಜಿಲ್ಲಾಧಿಕಾರಿ ಶಿವಪ್ಪ ಭಜಂತ್ರಿ ಅವರಿಗೂ ಮನವಿ ನೀಡಿದ್ದೇವೆ” ಎಂದು ಹೇಳಿದರು.

“ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ವಾಸ್ತವದಲ್ಲಿ ಸಿಸಿ ರಸ್ತೆ ಇಲ್ಲದೆ ಜನ ತಿರುಗಾಡಲು ಕಷ್ಟಪಡುತ್ತಿದ್ದಾರೆ. ಚರಂಡಿ ನೀರು ಊರ ಹೊರಗೆ ಹೋಗಲು ಸರಿಯಾಗಿ ಚರಂಡಿ ಇಲ್ಲದ ಕಾರಣ ಈ ಗ್ರಾಮದ ಅಂಗನವಾಡಿ ಕೇಂದ್ರದ ಮುಂದೆ ಕೆರೆಯಾಗಿ ಮಾರ್ಪಟ್ಟು ಅಲ್ಲಿ ಮಕ್ಕಳು ರೋಗ ರುಜುನಗಳಿಗೆ ತುತಾಗುತ್ತಿದ್ದಾರೆ. ಮಲೇರಿಯಾ, ಡೆಂಘೀ, ಚಿಕುನ್ ಗುನ್ಯಾ, ಕಾಲರಾ ಸೇರಿದಂತೆ ಇನ್ನು ಮುಂತಾದ ಅನೇಕ ಸಮಸ್ಯೆಗಳಿವೆ” ಎಂದರು.
“ಆದರ್ಶ ಗ್ರಾಮವೆಂದಲ್ಲಿ ಸರಿಯಾಗಿ ಮೂಲಸೌಕರ್ಯಗಳೂ ಇಲ್ಲದೆ ನಾವು ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದೇವೆ. ಸರ್ಕಾರ ಬರೀ ಹೆಸರಿಗೆ ಮಾತ್ರ ಆದರ್ಶ ಗ್ರಾಮವೆಂದು ಘೋಷಣೆ ಮಾಡಿರುವುದಕ್ಕೂ ಗ್ರಾಮ ಇರುವ ಸ್ಥಿತಿಗೂ ಎದ್ದು ಎದ್ದು ಕಾಣಿಸುತ್ತಿದೆ” ಎಂದು ಹೇಳಿದರು.

“ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಸಾಮಾಜಿಕ ಅಭಿವೃದ್ಧಿಯನ್ನೂ ಸಾಧಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆದರೆ ಈ ಗ್ರಾಮದಲ್ಲಿ ಅಭಿವೃದ್ಧಿ ವಿಷಯದಲ್ಲಿ ಶೂನ್ಯವಾಗಿದೆ. ಆದರ್ಶ ಗ್ರಾಮಗಳು ಸ್ಥಳೀಯವಾಗಿ ಅಭಿವೃದ್ಧಿ ಹೊಂದಿ ಆದರ್ಶ ಶಾಲೆಗಳಾಗಿ ಮುಂದುವರೆದು ಉಳಿದ ಗ್ರಾಮ ಪಂಚಾಯಿತಿಗಳಿಗೆ ಸ್ಫೂರ್ತಿಯಾಗಬೇಕಾಗಿದೆ” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚುನಾವಣಾ ಬಾಂಡ್ ಹಗರಣ | ಕೋರ್ಟ್ ಸೂಚನೆಯ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್
“ಸಂಸದರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾದರಿ ಪಂಚಾಯಿತಿಯನ್ನಾಗಿ ಮಾಡಿ ಸುತ್ತಮುತ್ತ ಉಳಿದ ಗ್ರಾಮ ಪಂಚಾಯಿತಿಗಳಿಗೂ ಸ್ಪೂರ್ತಿಯಾಗಬೇಕು” ಎಂದರು.
ಈ ಸಂದರ್ಭದಲ್ಲಿ ಸೂಗಪ್ಪ ಗೌಡ, ಬಸನ ಗೌಡ, ಪರ್ತಪ್ಪ ರೆಡ್ಡಿ, ಭೀಮನಗೌಡ ಸೇರಿದಂತೆ ಇತರರು ಇದ್ದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್