ವಸತಿ, ಭೂ ರಹಿತರಿಗೆ ನಿವೇಶನ ಹಾಗೂ ವಸತಿ ಸೌಕರ್ಯ ಕಲ್ಪಿಸಬೇಕು, ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಅ.5 ರಂದು ಬೆಳಗ್ಗೆ 10ಕ್ಕೆ ಬೆಂಗಳೂರಿನ ಗಾಂಧಿ ಭವನದಲ್ಲಿ ‘ಭೂಮಿ ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶ’ ಆಯೋಜಿಸಲಾಗಿದೆ ಎಂದು ಸಮಿತಿಯ ರಾಯಚೂರು ಜಿಲ್ಲಾ ಘಟಕದ ಸಂಚಾಲಕ ಮಾರೆಪ್ಪ ಹರವಿ ತಿಳಿಸಿದರು.
ರಾಯಚೂರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ಗೌರವದಿಂದ ಬಾಳುವಷ್ಟು ಭೂಮಿ ಮತ್ತು ಘನತೆಯಿಂದ ಬದುಕುವಂಥ ವಸತಿ ಪ್ರತಿಯೊಬ್ಬರ ಹಕ್ಕು’ ಅಂತ್ಯೋದಯವಾದಾಗಲೇ ಸ್ವಾತಂತ್ರ್ಯದ ನಿಜವಾದ ಅರ್ಥ’ ಎಂಬುವುದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ನಿಲುವಾಗಿತ್ತು. 2016ರಿಂದ 6 ಸುತ್ತಿನ ಹೋರಾಟ ಮಾಡಿದ್ದರು. ಇದರ ಫಲವಾಗಿ 2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಸಚಿವರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿತ್ತು. ಆನಂತರ ಸರ್ಕಾರ ಬದಲಾಗಿ ಬಿಜೆಪಿ ಅಧಿಕಾರಕ್ಕೆ ಬಂದು ಹಿನ್ನಡೆಯಾಯಿತು. ಈಗ ಪುನಃ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಅನೇಕ ಜಟಿಲ ಸಮಸ್ಯೆಗಳಿಂದ ಸಮಿತಿ ಬಡವರ, ಭೂರಹಿತರ ಪರ ತೀರ್ಮಾನ ಕೈಗೊಳ್ಳಲು ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೋರಾಟಗಾರ ಎಂ. ಆರ್. ಬೇರಿ ಮಾತನಾಡಿ, ರಾಜ್ಯದ ಲಕ್ಷಾಂತರ ಜನರಿಗೆ ವಸತಿ ಸೌಕರ್ಯ ಹಾಗೂ ತುಂಡು ಭೂಮಿಯೂ ಇಲ್ಲ. ಕೇಂದ್ರ ಸರ್ಕಾರದ ನೀತಿಗಳು, ಕಾಯ್ದೆಗಳಿಂದ ಫಲವತ್ತಾದ ಭೂಮಿ ಕಾರ್ಪೋರೆಟ್ ಸಂಸ್ಥೆಗಳ ಕೈ ಸೇರುತ್ತಿದೆ. ಅನೇಕ ವರ್ಷಗಳಿಂದ ಅರಣ್ಯ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಫಾರಂ ನಂಬರ್ 50, 53, 57 ರ ಅಡಿಯಲ್ಲಿ ಅರ್ಜಿ ಸಲ್ಲಿಸಿದರೂ ಭೂಮಿ ಮಂಜೂರಾತಿ ನೀಡುತ್ತಿಲ್ಲ. ಬದಲಾಗಿ ಅರಣ್ಯ ಒತ್ತುವರಿಯ ಹೆಸರಿನಲ್ಲಿ ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ದೂರಿದರು.
ದಶಕಗಳಿಂದ ಉಳುಮೆ ಮಾಡುತ್ತಿರುವ ಬಡ ರೈತರಿಗೆ ಯುದ್ಧೋಪಾದಿಯಲ್ಲಿ ಭೂಮಿ ಮಂಜೂರು ಮಾಡಬೇಕು. ಬಡವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಉನ್ನತ ಮಟ್ಟದ ಸಮಿತಿ ಪುನರ್ ಚಾಲನೆಗೊಳಿಸಬೇಕು. ರೈತರಿಂದ ಬಲವಂತದ ತೆರವು ಕೈಬಿಡಬೇಕು. ಬಲಾಢ್ಯರ ಒತ್ತುವರಿಗಳನ್ನು ಸ್ವಾಧೀನಪಡಿಸಬೇಕು ಎಂದು ಮನವಿ ಮಾಡಲಾಗುವುದು ಎಂದು ಹೇಳಿದರು.
ಇದನ್ನು ಓದಿದ್ದೀರಾ? ರಾಯಚೂರು | ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯಿಸಿ ಶಾಸಕ ದದ್ದಲ್‌ಗೆ ಮನವಿ
ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗುಜರಾತಿನ ದಲಿತರ ಹೋರಾಟಗಾರ ಹಾಗೂ ಶಾಸಕ ಜಿಗ್ನೇಶ್ ಮೇವಾನಿ, ಪ್ರಗತಿಪರ ಚಿಂತಕಿ ಡಾ.ವಿಜಯಮ್ಮ ಭಾಗವಹಿಸಲಿದ್ದು, ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಖಾಜಾ ಅಸ್ಲಂ ಅಹ್ಮದ್, ಆಂಜನೇಯ ಕುರುಬದೊಡ್ಡಿ, ನರಸಿಂಹಲು ಉಪಸ್ಥಿತರಿದ್ದರು.
