ಪಿಂಜಾರ, ನದಾಫ್ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಖ್ಯಮಂತ್ರಿಗೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಪಿಂಜಾರ, ನದಾಫ್, ಮನ್ಸೂರಿ ಹಕ್ಕುಗಳ ಸಂಘದ ವತಿಯಿಂದ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಸುಮಾರು 35 ಲಕ್ಷ ಜನಸಂಖ್ಯೆ ಹೊಂದಿರುವ ನದಾಫ್, ಪಿಂಜಾರ ಜನಾಂಗ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ, ರಾಜಕೀಯ ಕ್ಷೇತ್ರಗಳಲ್ಲಿ ತೀರಾ ಹಿಂದುಳಿದಿದೆ. ಹಿಂದುಳಿದ ಪ್ರವರ್ಗ–1ರಲ್ಲಿ ಬರುವ ಶೋಷಿತ ಸಮಾಜವಾಗಿದ್ದು, ಸರ್ಕಾರದ ಯೋಜನೆಗಳು ಸಮುದಾಯದ ಜನರಿಗೆ ತಲುಪುತ್ತಿಲ್ಲ ಎಂದು ದೂರಿದರು.
ಪಿಂಜಾರ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು 2023ರ ಮಾರ್ಚ್ 24ರಂದು ನದಾಫ್ ಹಾಗೂ ಇತರೆ 13 ಜಾತಿಗಳನ್ನು ಸೇರಿಸಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಘೊಷಣೆ ಮಾಡಿದ್ದರು. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನಮ್ಮ ಸಮುದಾಯದ ಮತಗಳೂ ನಿರ್ಣಾಯಕವಾಗಿವೆ. ಆದರೆ ಸಮುದಾಯಕ್ಕೆ ಕಡೆಗಣಿಸುತ್ತಿರುವುದು ಸರಿಯಲ್ಲ. ವಿಧಾನಸಭೆಯಲ್ಲಿ ಸಮುದಾಯದ ಪರ ಧ್ವನಿ ಎತ್ತಲು ಪಿಂಜಾರ ಸಮುದಾಯದ ಯಾವುದೇ ಒಬ್ಬ ಶಾಸಕರಿಲ್ಲ. ಹೀಗಾಗಿ ಸಮುದಾಯದ ಪರವಾಗಿ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಮೈಸೂರು ದಸರಾದಲ್ಲೂ ಕೋಮು ದ್ವೇಷ; ದೀಪಾಲಂಕಾರಕ್ಕೂ ಬಿಜೆಪಿ ಅಪಸ್ವರ
ಸಂಘದ ರಾಜ್ಯಾಧ್ಯಕ್ಷ ಇಮ್ರಾನ್ ಬಡೇಸಾಬ್, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ ಜಾವೀದ್, ಮಹಿಳಾ ಘಟಕದ ಅಧ್ಯಕ್ಷೆ ಖಾಸಿಂ ಬೀ, ಮುಖಂಡರಾದ ಗುಂಜಳ್ಳಿ ಶಫಿ, ಯಾಕೂಬ್ ಉಪಸ್ಥಿತರಿದ್ದರು.
