ರಾಯಚೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿದ ಪರಿಣಾಮ ರಸ್ತೆ, ಸೇತುವೆಗಳು ಹಾಗೂ ಹೊಲಗಳಲ್ಲಿ ನೀರು ನುಗ್ಗಿ ಸಾಕಷ್ಟು ಬೆಳೆ ನಷ್ಟ ಉಂಟಾಗಿದೆ.
ರಾಯಚೂರಿನಲ್ಲಿ 15.7 ಮಿಮೀ ಮಳೆಯಾಗಿದ್ದು, ನಗರದ ಬಹುತೇಕ ರಸ್ತೆಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ರಾಯಚೂರು ತಾಲೂಕಿನಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದ್ದು, ಚಂದ್ರಬಂಡಾ ಹೋಬಳಿಯಲ್ಲಿ 13.8 ಮಿ.ಮೀ. ಮಳೆಯಾಗಿದೆ. ರಾಯಚೂರು ಚಂದ್ರಬಂಡಾ ಮಾರ್ಗ ಮದ್ಯ ಕಡಗಂದೊಡ್ಡಿ ಗ್ರಾಮದ ಸಮೀಪದ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರಿಂದ ಸಂಚಾರಕ್ಕೆ ತೊಂದರೆ ಆಗಿದೆ.
ದೇವಸೂಗುರು ಹೋಬಳಿಯಲ್ಲಿ 22.5 ಮಿಮೀ ಮಳೆಯಾಗಿದ್ದು, ಕೂಡ್ಲೂರು ಗ್ರಾಮಕ್ಕೆ ತೆರಳುವ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಕಷ್ಟ ಅನುಭವಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಜಿಂದಾಲ್‌ಗೆ ಭೂಮಿ ಮಾರಾಟ: ರಾಜ್ಯ ಸರ್ಕಾರದಿಂದ ದ್ರೋಹ : ರಾಘವೇಂದ್ರ ಕುಷ್ಟಗಿ
ಗಿಲ್ಲೆಸೂಗುರು ಹೋಬಳಿಯಲ್ಲಿ 19.9 ಮಿಮೀ, ಕಲ್ಮಲಾ ಹೋಬಳಿಯಲ್ಲಿ 21.8 ಮಿಮೀ, ಯರಗೇರಾ ಹೋಬಳಿಯಲ್ಲಿ 21.8 ಮಿಮೀ, ದೇವದುರ್ಗ ತಾಲೂಕಿನಲ್ಲಿ 38.9 ಮಿಮೀ ಮಳೆಯಾಗಿದೆ. ಜಾಲಹಳ್ಳಿಯ ರಾಜ್ಯ ಹೆದ್ದಾರಿಯಲ್ಲಿ ನೀರು ಹರಿದು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಜಾಲಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆ ಸಮೀಪದಲ್ಲಿ ಸೇತುವೆ ಕೊಚ್ಚಿ ಹೋಗಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡು ತೊಂದರೆಗೆ ಸಿಲುಕುವಂತಾಯಿತು.
ಲಿಂಗಸುಗುರು ತಾಲೂಕಿನಲ್ಲಿ 5.3 ಮಿಮೀ ಮಳೆಯಾಗಿದ್ದರೆ, ಮಾನ್ವಿ ತಾಲೂಕಿನಲ್ಲಿ 13.9 ಮಿಮೀ ಮಳೆಯಾಗಿದೆ. ರಾಯಚೂರು ತಾಲೂಕಿನಲ್ಲಿ 19.4 ಮಿಮೀ ಮಳೆಯಾಗಿದೆ. ಸಿಂಧನೂರಿನಲ್ಲಿ 1.7 ಮಿಮೀ, ಮಸ್ಕಿ ತಾಲೂಕಿನಲ್ಲಿ 2.4 ಮಿಮೀ ಹಾಗೂ ಸಿರವಾರ ತಾಲೂಕಿನಲ್ಲಿ 21.5 ಮಿಮೀ ಮಳೆಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
