ರಾಯಚೂರು ನಗರದಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗ ಹೆಚ್ಚಳವಾಗುತ್ತಿದ್ದು, ನಗರಸಭೆಯಿಂದ ಸಾರ್ವಜನಿಕರ ಸಹಕಾರದೊಂದಿಗೆ ಸ್ವಚ್ಚತಾ ಅಭಿಯಾನ ಪ್ರಾರಂಭಿಸಿರುವುದು ಸ್ವಾಗತಾರ್ಹ. ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ನಗರಸಭೆಯೊಂದಿಗೆ ಸಹಕರಿಸಬೇಕು. ಸ್ವಯಂಪ್ರೇರಿತವಾಗಿ ನಗರ ಸ್ವಚ್ಚತೆಗೆ ಕೈ ಜೋಡಿಸಬೇಕು ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಹೇಳಿದರು.
ರಾಯಚೂರು ನಗರಸಭೆ, ಜಿಲ್ಲಾಡಳಿತ ಮತ್ತು ಎನ್ ಎಸ್ ಬೋಸರಾಜ ಫೌಂಡೇಷನ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಐದು ದಿನಗಳ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ನಗರಸಭೆ ಹಿರಿಯ ಸದಸ್ಯ ಜಯಣ್ಣಮಾತನಾಡಿ, “ನಗರಸಭೆಯಿಂದ ಮಾತ್ರ ನಗರ ಸ್ವಚ್ಚತೆ ಸಾಧ್ಯವಾಗುವದಿಲ್ಲ, ನಗರದ ನಿವಾಸಿಗಳೂ ಕೂಡ ಸಹಕರಿಸಬೇಕಿದೆ. ನಗರದಲ್ಲಿ ಹೆಚ್ಚುತ್ತಿರುವ ಕಸವನ್ನು ನಿಯಂತ್ರಿಸಲು ಎಲ್ಲೆಂದರಲ್ಲಿ ಕಸ ಎಸೆಯದೆ ನಗರಸಭೆ ವಾಹನಗಳಿಗೆ ನೀಡಿದರೆ ಬಹುತೇಕ ಕಸ ವಿಲೇವಾರಿಯಾಗುತ್ತದೆ. ನಗರಸಭೆ ಸ್ವಚ್ಚತೆಗೆ ಆಧ್ಯತೆ ನೀಡಿ ಕಾರ್ಯ ನಿರ್ವಹಿಸುತ್ತಿದೆ. ಇನ್ನಷ್ಚು ಸ್ವಚ್ಚತೆಗೆ ಜನರು ಸಹಕರಿಸಬೇಕು” ಎಂದರು.
ಕಾಂಗ್ರೆಸ್ ಮುಖಂಡ ರವಿ ಬೋಸರಾಜ್ ಮಾತನಾಡಿ, “ನಗರಸಭೆ ಆಧ್ಯತೆ ಮೇಲೆ ಸ್ವಚ್ಚತಾ ಅಭಿಯಾನ ಪ್ರಾರಂಭಿಸಿರುವದು ಶ್ಲಾಘನೀಯವಾಗಿದೆ. ಕಸ ವಿಲೇವಾರಿಗೆ ಬೇಕಾದ ಸಹಾಯ ಸಹಕಾರ ನೀಡಲಾಗುವುದು. ಸಂಘ ಸಂಸ್ಥೆಗಳ, ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಕಸ ವಿಲೇವಾರಿಗೆ ಮುಂದಾಗಬೇಕು. ಪಕ್ಷಬೇಧ ಮೆರೆತು ಎಲ್ಲರೂ ಕೈ ಜೋಡಿಸಿದರೆ ಎಲ್ಲ ರೀತಿಯ ನೆರವು ನೀಡಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸೌಜನ್ಯ ಪ್ರಕರಣ ಮರು ತನಿಖೆಗೆ ಶ್ರೀರಾಮ ಸೇನೆ ಆಗ್ರಹ
“50 ಟ್ರಾಕ್ಟರ್ ಮತ್ತು 15 ಜೆಸಿಬಿಗಳಿಂದ ನಗರದ ಹಲವು ವಾರ್ಡ್ಗಳಲ್ಲಿ ಐದು ದಿನಗಳವರೆಗೆ ಸ್ವಚ್ಚತಾ ಕಾರ್ಯ ನಡೆಯಲಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಸಿದ್ದಲಿಂಗಯ್ಯ, ನಗರಸಭೆ ಸದಸ್ಯರುಗಳಾದ ಜಿಂದಪ್ಪ, ದರೂರು ಬಸವರಾಜ, ನರಸಿಂಹಲು ಮಾಡಗಿರಿ, ಬಿ ರಮೇಶ, ಸಾಜೀದ ಸಮೀರ್, ಕೆ ಶಾಂತಪ್ಪ, ಜಿ ಶಿವಮೂರ್ತಿ, ರುದ್ರಪ್ಪ ಅಂಗಡಿ, ತಿಮ್ಮಾರೆಡ್ಡಿ, ಮಹ್ಮದಶಾಲಂ, ನಗರ ಬ್ಲಾಕ್ ಅಧ್ಯಕ್ಷ ಜಿ ಬಸವರಾಜರೆಡ್ಡಿ, ಹರಿಬಾಬು, ಜಾವಿದ್ ಉಲ್ ಹಕ್, ಸುರೇಶ, ವಾಹಿದ್, ಅಲಿ, ನರಸರೆಡ್ಡಿ, ತಿಮ್ಮಪ್ಪನಾಯಕ, ಜಿ. ಸುರೇಶ ಸೇರಿದಂತೆ ಬಹುತೇಕರು ಇದ್ದರು.