ದೇವದಾಸಿ ಮಹಿಳೆಯರಿಗೆ ಬಾಕಿ ಪಿಂಚಣಿ ನೀಡುವುದು ಹಾಗೂ ಮಕ್ಕಳಿಗೆ ಶಿಷ್ಯವೇತನ ನೀಡುವುದು ಸೇರಿದಂತೆ ಹಲವು ಬೇಡಿಕೆಗೆ ಆಗ್ರಹಿಸಿ ರಾಜ್ಯ ಮಹಿಳಾ ಒಕ್ಕೂಟ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚೇತನ ಕುಮಾರ್ ಭೇಟಿ ನೀಡಿ ಅಹವಾಲು ಆಲಿಸಿದರು.
ದೇವದಾಸಿ ಮಹಿಳೆಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಶುಕ್ರವಾರ ಬೆಳಗ್ಗೆ ʼರಾಯಚೂರು | ಆರ್ಡಿಪಿಆರ್ ಅಧಿನಿಯಮ 1993ರ ಸೆಕ್ಷನ್ 3ಎ 3(5) ಅನುಷ್ಠಾನಕ್ಕೆ ಆಗ್ರಹ; ಅನಿರ್ದಿಷ್ಟಾವಧಿ ಧರಣಿʼ ಎಂಬ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು. ಜೊತೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೀಡಿಯಾ ಕೋಆರ್ಡಿನೇಟರ್ ಸಂಪರ್ಕಿಸಿದ್ದು, ವಿಷಯ ತಿಳಿಸಲಾಗಿತ್ತು.
ದೇವದಾಸಿ ಮಹಿಳೆಯ ಬೇಡಿಕೆಗೆ ಸ್ಪಂದಿಸುವಂತೆ ಹಾಗೂ ಮದ್ಯ ಮಾರಾಟಕ್ಕೆ ಪರವಾನಗಿ ನೀಡದಂತೆ ಆರ್ಡಿಪಿಆರ್ ಸಚಿವರು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವರ ಮೀಡಿಯಾ ಕೋಆರ್ಡ್ನೇಟರ್ ಆದರ್ಶ್ ಕುಮಾರ್ ಈ ದಿನ.ಕಾಮ್ಗೆ ತಿಳಿಸಿದ್ದಾರೆ.
ಪಂಚಾಯತ್ ರಾಜ್ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚೇತನ ಕುಮಾರ್ ಅವರಿಗೆ ಭೇಟಿ ನೀಡಿ ಅಹವಾಲು ಅಹವಾಲು ಸ್ವೀಕರಿಸುವುದಾಗಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದು, ಬೇಡಿಕೆಗಳ ಕುರಿತು ಶುಕ್ರವಾರ ಸಂಜೆಯೊಳಗೆ ಪರಿಹಾರ ಒದಗಿಸುವ ಕುರಿತು ಭರವಸೆ ನೀಡಿದ್ದಾರೆ.
ಘಟನೆಯ ಹಿನ್ನೆಲೆ
ದೇವದಾಸಿ ಮಹಿಳೆಯರಿಗೆ ಬಾಕಿಯಿರುವ ಪಿಂಚಣಿ ಬಿಡುಗಡೆ, ಆರ್ಡಿಪಿಆರ್ ಅಧಿನಿಯಮ 1993ರ ಸೆಕ್ಷನ್ 3ಎ 3(5) ಅನುಷ್ಠಾನ ಹಾಗೂ ಮದ್ಯ ಮಾರಾಟಕ್ಕೆ ಪರವಾನಗಿ ನೀಡದಿರುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಮಹಿಳಾ ಒಕ್ಕೂಟದಿಂದ ಸಾಮಾಜಿಕ ಕಾರ್ಯಕರ್ತ ಅಭಯ್ ನೇತೃತ್ವದಲ್ಲಿ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದರು.
“ದೇವದಾಸಿಯರ ಮಕ್ಕಳಿಗೆ ಈ ಮುಂಚೆ ಪ್ರಾಥಮಿಕ ಶಾಲಾ ಮಕ್ಕಳಿಗೆ ₹1,000, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ₹1,500 ಹಾಗೂ ಪದವಿ ವಿದ್ಯಾರ್ಥಿಗಳಿಗೆ ₹3,000 ಶಿಷ್ಯವೇತನ ನೀಡುವ ಯೋಜನೆ ಜಾರಿಗೊಳಿಸಿದ್ದನ್ನು ಈಗ ಸ್ಥಗಿತಗೊಳಿಸಲಾಗಿದೆ. ಸಕಾಲದಲ್ಲಿ ಪ್ರತಿ ತಿಂಗಳು ಪಿಂಚಣಿ ಹಣವೂ ಬಿಡುಗಡೆಯಾಗುತ್ತಿಲ್ಲ” ಎಂದು ಪ್ರತಿಭಟನಾಕಾರರು ಅಲವತ್ತುಕೊಂಡಿದ್ದರು.
“ದೇವದಾಸಿ ಮಹಿಳೆಯರ ಸರ್ವೆಯಲ್ಲಿ ಅನೇಕರು ಬಿಟ್ಟು ಹೋಗಿದ್ದು, ಸೇರ್ಪಡೆ ಮಾಡುವುದು ಸೇರಿದಂತೆ ಪಿಂಚಣಿ ಒಂದು ವರ್ಷದಿಂದ ಬಾಕಿಯಿದ್ದರೂ ಯವುದೇ ಕ್ರಮ ಕೈಗೊಳ್ಳದೇ ಇರುವದರಿಂದ ಆಗುತ್ತಿರುವ ಸಮಸ್ಯೆ ನೀಗಿಸಬೇಕು. ಜೊತೆಗೆ ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಸ್ಪಂದಿಸದೇ ಹೋದಲ್ಲಿ ಜೈಲ್ ಭರೋ ಕಾರ್ಯಕ್ರಮ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಆರ್ಡಿಪಿಆರ್ ಅಧಿನಿಯಮ 1993ರ ಸೆಕ್ಷನ್ 3ಎ 3(5) ಅನುಷ್ಠಾನಕ್ಕೆ ಆಗ್ರಹ; ಅನಿರ್ದಿಷ್ಟಾವಧಿ ಧರಣಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಜೋಡಣೆ ಸೇರಿದಂತೆ ಇರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸುವಂತೆ ರಾಹುಲ್ ಪಾಂಡ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿಭಟನಾ ಧರಣಿಯಲ್ಲಿ ಮೋಕ್ಷಮ್ಮ, ವಿದ್ಯಾಪಾಟೀಲ್, ಹುಲಿಗೆಮ್ಮ, ಮಾರೆಮ್ಮ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ