ಸಿಂಧನೂರಿನ ಶಿವಜ್ಯೋತಿ ನಗರದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಹಲವಾರು ಸಮಸ್ಯೆಗಳಿವೆ. ಇದರಿಂದ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಹಾಸ್ಟೆಲ್ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಕರ್ನಾಟಕ ವಿಧ್ಯಾರ್ಥಿ ಸಂಘಟನೆ (ಕೆವಿಎಸ್) ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಸಿಂಧನೂರು ತಹಶೀಲ್ದಾರ್ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ ಕಾರ್ಯಕರ್ತರು, “ಹಾಸ್ಟೆಲ್ ವಾರ್ಡ್‌ನ್ ಬೇಜವ್ದಾರಿ ಕಾರ್ಯನಿರ್ವಹಣೆ, ಮೂಲ ಸೌಕರ್ಯಗಳ ಕೊರತೆ ಹಾಗೂ ಅನಗತ್ಯ ಕಿರುಕುಳದಿಂದ ವಿದ್ಯಾರ್ಥಿನಿಯರು ಬೇಸತ್ತಿದ್ದಾರೆ. ಇದು ಅವರ ವಿದ್ಯಾಭ್ಯಾಸದ ಮೇಲೆ ಮತ್ತು ಪರೀಕ್ಷಾ ಫಲಿತಾಂಶದ ಮೇಲೆ ವ್ಯತಿರಿಕ್ತಿ ಪರಿಣಾಮ ಬೀರುತ್ತಿದೆ” ಎಂದು ಹೇಳಿದ್ದಾರೆ.
“ಹಾಸ್ಟೆಲ್ ಸಮಸ್ಯೆಗಳ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆಗಳ ಕಾರಣದಿಂದ ಹಾಸ್ಟೆಲ್‌ನ ವಿದ್ಯಾರ್ಥಿನಿಯರು ದಿನವೂ ಯಾತನೆ ಅನುಭವಿಸುವಂತಾಗಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿಗೆ ಬಿಗಡಾಯಿಸುತ್ತಿದೆ. ಸಮಸ್ಯೆಗಳು ವಿಕೋಪಕ್ಕೆ ಹೋಗಿ ಪರಿಸ್ಥಿತಿ ಸಂಪೂರ್ಣ ಹದಗೆಡುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ಹದಿನೈದು ದಿನಗಳಲ್ಲಿ ಹಾಸ್ಟೆಲ್ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ತಾಲೂಕು ಕಚೇರಿ ಮುಂದೆ ಧರಣಿ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿನಿಯರ ಬೇಡಿಕೆಗಳು
- ಹಾಸ್ಟೆಲ್ ವಾರ್ಡನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಕೂಡಲೇ ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕು.
- ರೇಷನ್ ಕೊರತೆ, ಊಟ ತಯಾರಿಕೆಯಲ್ಲಿ ಅಶುಚಿತ್ವ, ಗುಣಮಟ್ಟದ ತರಕಾರಿ ಬಳಸದೇ ಕೊಳೆತ ತರಕಾರಿ ಬಳಸಿ ಅಡುಗೆ ತಯಾರಿಸಲಾಗುತ್ತಿದೆ. ಅವ್ಯವಸ್ಥೆಯನ್ನು ಪರಿಹರಿಸಿ, ಗುಣಮಟ್ಟದ ಆಹಾರ ನೀಡಬೇಕು.
- ಗ್ರಂಥಾಲಯದಲ್ಲಿನ ಪುಸ್ತಕಗಳ ಕೊರತೆ ಪರಿಹರಿಸಬೇಕು.
- ಕ್ರೀಡಾ ಸಾಮಗ್ರಿಗಳನ್ನು ಒದಗಿಸಬೇಕು.
- ಹಾಸ್ಟೆಲ್‌ನ ವಾರ್ಡ್‌ನ್ ವಿದ್ಯಾರ್ಥಿನಿಯರ ಮೇಲೆ ಅನುಚಿತವಾಗಿ ವರ್ತಿಸುವುದಲ್ಲದೇ ಮಾನಸಿಕ ಕಿರುಕುಳ ನೀಡುತ್ತಿದ್ದು, ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು.
ಹಕ್ಕೊತ್ತಾಯ ಪತ್ರ ಸಲ್ಲಿಸುವ ವೇಳೆ ಕರ್ನಾಟಕ ವಿಧ್ಯಾರ್ಥಿ ಸಂಘಟನೆ ರಾಜ್ಯ ಮುಖಂಡ ಗುರುಬಸವ ಬರಗೂರು, ತಾಲ್ಲೂಕು ಮುಖಂಡ ಚಾಂದ್ ಪಾಶ, ಸಮದ್ ಚೌದ್ರಿ, ಹಾಗೂ ವಿಧ್ಯಾರ್ಥಿಗಳು ಇದ್ದರು.