ಜಾಗಿರ ಜಾಡಲದಿನ್ನಿ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿನಿಲಯದ ವಾರ್ಡನ್ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ವಸತಿ ನಿಲಯದ ವಿದ್ಯಾರ್ಥಿನಿಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ವಸತಿನಿಲಯಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ದೇವದುರ್ಗ ತಾಲೂಕು ಘಟಕದ ಕಾರ್ಯಕರ್ತರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
“ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಈ ವಸತಿನಿಲಯ ಸಮಸ್ಯೆಗಳ ತಾಣವಾಗಿದೆ. ಶುದ್ಧವಾದ ನೀರಿಲ್ಲ. ಕುಡಿಯುವ ನೀರಿನ ಫೀಲ್ಟರ್ ಸರಿಯಾಗಿಲ್ಲ. ಈ ತಾಲೂಕಿನಲ್ಲಿ ಈಗಾಗಲೇ ಕಲುಷಿತ ನೀರು ಕುಡಿದು ಸಾಕಷ್ಟು ಸಾವುಗಳು ಸಂಭವಿಸಿವೆ. ನಮಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ವಾರ್ಡನ್ ಅವರೇ ನೇರ ಕಾರಣ” ಎಂದು ಆರೋಪಿಸಿದರು.
“ವಿದ್ಯಾರ್ಥಿನಿಯರು ಚಿಕ್ಕವರಿದ್ದಾರೆ, ಅವರಿಗೆ ಏನೂ ಗೊತ್ತಾಗುವುದಿಲ್ಲವೆಂದು ತಿಳಿದು ಮೆನು ಪ್ರಕಾರ ಚಿಕನ್ ಇದ್ದರೂ ಅದನ್ನು ಯಾರೂ ಕೇಳಲ್ಲವೆಂದು ಹಾಸ್ಟೆಲ್ ವಾರ್ಡನ್ ಚಿಕನ್ ಮಾಡಿಸದೆ ದುಡ್ಡು ಉಳಿಸಿಕೊಳ್ಳುತ್ತಿದ್ದಾರೆ” ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
“ಸದರಿ ವಸತಿ ನಿಲಯದಲ್ಲಿ ಇರುವ ಮಲಗುವ ಹಾಸಿಗೆಗಳು ಹರಿದು ಹೋಗಿವೆ. ಒಂದು ಹಾಸಿಗೆಯಲ್ಲಿ ಮೂರು ಮಕ್ಕಳನ್ನು ಮಲಗಿಸುತ್ತಾರೆ” ಎಂದು ವಿದ್ಯಾರ್ಥಿಗಳು ಅವಲತ್ತುಕೊಂಡರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಉಸ್ಮಾನಿಯಾ ತರಕಾರಿ ಮಾರುಕಟ್ಟೆ; ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಆಗ್ರಹ
“ವಸತಿ ನಿಲಯದ ವಾತಾವರಣ ತುಂಬಾ ಹಾಳಾಗಿದ್ದು, ವಾಸನೆ ಬರುತ್ತಿದೆ. ಮಕ್ಕಳು ಸದರಿ ಸಮಸ್ಯೆಗಳ ಬಗ್ಗೆ ಕೇಳಲು ಹೋದರೆ, ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವುದು ಬಾಯಿಗೆ ಬಂದಂತೆ ಬೈಯ್ಯುವುದು ಮಾಡುತ್ತಾರೆ” ಎಂದು ದೂರಿದರು.
ಈ ಸಂದರ್ಭದಲ್ಲಿ ಮಲ್ಲಪ್ಪ ಗೌಡರ, ಬಾಳಪ್ಪ ಬಾವಿಮನಿ, ಭಿಮಶಪ್ಪ ಭಂಡಾರಿ, ಬಸವರಾಜ್ ಜಾಲಹಳ್ಳಿ ಇನ್ನಿತರರು ಹಾಜರಿದ್ದರು.