ತಿಂಥಣಿ ಬ್ರಿಡ್ಜ್‌ನಿಂದ ರಾಯಚೂರು ಜಿಲ್ಲೆಗೆ ಹೋಗುವ ಮಾರ್ಗದಲ್ಲಿ ಟೋಲ್ ಗೇಟ್‌ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದೇ ನೆಪದಲ್ಲಿ ಕರವಸೂಲಿಗೆ ಮುಂದಾದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಶಾಸಕಿ ಕರೆಮ್ಮ ಜಿ. ನಾಯಕ ಎಚ್ಚರಿಕೆ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿ, “ಕಳೆದ 2 ವರ್ಷಗಳಿಂದ ಟೋಲ್ ಗೇಟ್ ನಿರ್ಮಾಣಕ್ಕೆ ಮುಂದಾದಾಗ ಸಂಬಂಧಪಟ್ಟ ಗುತ್ತಿಗೆದಾರರನ್ನು ಟೋಲ್ ಗೇಟ್ ನಿರ್ಮಿಸದಿರಲು ಒತ್ತಡ ಹೇರಲಾಗಿತ್ತು. ಈಗ ಪುನಃ ಟೋಲ್ ಗೇಟ್ ನಿರ್ಮಾಣಕ್ಕೆ ಮುಂದಾಗಿ ಬಡವರ ಹಣ ಲೂಟಿ ಹೊಡೆಯುವುದಕ್ಕೆ ದಾರಿ ಕಂಡುಕೊಳ್ಳಲಾಗುತ್ತಿದೆ. ಇದರ ಹಿಂದೆ ಪ್ರಬಲ ಶಕ್ತಿಗಳ ಕೈವಾಡವಿದೆ” ಎಂದು ಆರೋಪಿಸಿದರು.
“ಈ ಮಾರ್ಗದಲ್ಲಿ ಭಾರಿ ವಾಹನಗಳಾಗಲೀ, ವಾಣಿಜ್ಯಕ್ಕೆ ಸಂಬಂಧಿಸಿದ ವಾಹನಗಳಾಗಲೀ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ನಡೆಸುವುದಿಲ್ಲ. ತಾಲೂಕಿನ ಬಡಜನರು, ಕೂಲಿಕಾರರು, ಮಧ್ಯಮವರ್ಗದವರೇ ಹೆಚ್ಚಾಗಿ ಓಡಾಡುವ ಈ ರಸ್ತೆಯಲ್ಲಿ ವಿನಾಕಾರಣ ಟೋಲ್ ಗೇಟ್ ನಿರ್ಮಿಸಿ ಲೂಟಿ ಹೊಡೆಯುವ ಹುನ್ನಾರ ನಡೆದಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಕ್ಷೇತ್ರದ ಜನತೆ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಯಾವುದೇ ಕಾರಣಕ್ಕೂ ಹಣ ಪಾವತಿಸಬಾರದು. ಒತ್ತಡದಿಂದ ವಸೂಲಿಗೆ ಮುಂದಾದರೆ ಕಾನೂನು ಹೋರಾಟ ನಡೆಸಲಾಗುವುದು. 2020ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಸ್ತೆ ಕಾಮಗಾರಿ ನಡೆದಿತ್ತು. ಟೋಲ್ ಗೇಟ್‌ಗಳ ನಿರ್ಮಾಣದ ಕುರಿತು ಚರ್ಚಿಸಬೇಕಾಗಿತ್ತು. ರಸ್ತೆ ನಿರ್ಮಾಣ ವೇಳೆ ಯಾವುದೇ ಟೋಲ್ ಗೇಟ್ ನಿಯಮವಿಲ್ಲದೆ ಇದ್ದಕ್ಕಿದ್ದಂತೆ ನಿರ್ಮಾಣಕ್ಕೆ ಮುಂದಾಗಿದ್ದು ಅಕ್ಷಮ್ಯ ಅಪರಾಧ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ನಿಯಮಾನುಸಾರ ಮರಳು ಕೇಂದ್ರ ಸ್ಥಾಪನೆಗೆ ಸಿಐಟಿಯು ಒತ್ತಾಯ
“ನಾಲ್ಕೈದು ವರ್ಷಗಳು ಕಳೆದ ಮೇಲೆ ಇದೀಗ ಟೋಲ್ ಗೇಟ್‌ಗಳ ನಿರ್ಮಾಣ ಕಾರ್ಯ ನಡೆದಿದೆ. ಸಂಬಂಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಟೋಲ್ ಗೇಟ್ ಕಾಮಗಾರಿ ನಿಲ್ಲಿಸಲಾಗುವುದು” ಎಂದು ತಿಳಿಸಿದರು.
