ದೇವದುರ್ಗ ಕ್ಷೇತ್ರದಲ್ಲಿ ಮಾಜಿ ಶಾಸಕನ ಬೆಂಬಲಿಗರಿಂದ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಪ್ರಯತ್ನಿಸಿದ್ದರಿಂದ ಜೀವ ಬೆದರಿಕೆ ಇದೆ. ನನಗೆ ರಕ್ಷಣೆ ನೀಡಬೇಕೆಂದು ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ್ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, “ಅಧಿಕಾರಿಗಳು ಮಾಜಿ ಶಾಸಕರ ಬೆಂಬಲಕ್ಕೆ ನಿಂತಿದ್ದಾರೆ. ಶಿಷ್ಟಾಚಾರಕ್ಕಾದ್ರೂ ಅಧಿಕಾರಿಗಳು ನನ್ನ ಮಾತಿಗೆ ಬೆಲೆ ಕೊಡ್ತಿಲ್ಲ. ನನಗೆ ಕ್ಷೇತ್ರದಲ್ಲಿ ರಕ್ಷಣೆ ಕೊಡಬೇಕು. ಜನಸೇವೆಗೆ ಅವಕಾಶ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
“ನಾನೊಬ್ಬಳು ಬಡ ಶಾಸಕಿ. ಆದರೆ, ನನ್ನ ಕ್ಷೇತ್ರದಲ್ಲಿ ನೆಮ್ಮದಿಯಾಗಿರಲು ಸಾಧ್ಯವಾಗುತ್ತಿಲ್ಲ. ಕ್ಷೇತ್ರದ ಮಾಜಿ ಶಾಸಕರ ಬೆಂಬಲಿಗರು ನನಗೆ ಜೀವ ಬೆದರಿಕೆ ಒಡ್ಡಿದ್ದಾರೆ. ನನ್ನ ತಮ್ಮನ ಮಗನ ಮೇಲೆ ಹಲ್ಲೆ ನಡೆದಿದೆ. ವಿಧಾನಸಭೆಯಲ್ಲೂ ನನ್ನ ಸೀಟಿನಲ್ಲಿ ಬೇರೊಬ್ಬ ವ್ಯಕ್ತಿ ಬಂದು ಕುಳಿತುಕೊಂಡಿದ್ದರು” ಎಂದರು.