ರಸ್ತೆ ಬದಿಗೆ ನಿಂತಿದ್ದ ಮೂವರ ಮೇಲೆ ಭತ್ತದ ಹೊಟ್ಟು(ತೌಡು) ತರುತ್ತಿದ್ದ ಲಾರಿ ಪಲ್ಟಿಯಾಗಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಸಿಂಧನೂರು ತಾಲೂಕಿನ ಪಿಡಬ್ಲ್ಯೂಡಿ ಕ್ಯಾಂಪ್ ಹೊರವಲಯದಲ್ಲಿ ನಡೆದಿದೆ.
ಮಲ್ಲಿಕಾರ್ಜುನ, ಶಿವರಾಜ, ಮಹೆಬೂಬ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು ಎನ್ನಲಾಗಿದೆ.
ಮಧ್ಯರಾತ್ರಿ 11ರ ಸುಮಾರಿಗೆ ವೇಗವಾಗಿ ಬರುತ್ತಿದ್ದ ಲಾರಿಯು ಭತ್ತದ ಹೊಟ್ಟು ತುಂಬಿಕೊಂಡು ಚಲಿಸುತ್ತಿತ್ತು. ರಸ್ತೆ ಬದಿಯಲ್ಲಿ ನಿಂತಿದ್ದ ಮೂವರ ಮೇಲೆ ಏಕಾಏಕಿ ಲಾರಿ ಪಲ್ಟಿಯಾಗಿದ್ದು, ಮೂವರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತಪಟ್ಟ ಮೂವರು ನೀರಾವರಿ ಇಲಾಖೆಯ ಅಧಿಕಾರಿಗಳೆಂದು ತಿಳಿದುಬಂದಿದ್ದು, ಸಿಂಧನೂರು ತಾಲೂಕಿನ ರಾಂಪುರ ಗ್ರಾಮದ ಶಿವರಾಜ, ಸಿಂಧನೂರು ನಗರದ ಮಹೆಬೂಬ್, ಲಿಂಗಸೂಗೂರು ತಾಲೂಕಿನ ಸರ್ಜಾಪುರ ಗ್ರಾಮದ ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ.
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಲಾರಿ ಚಾಲಕ ಬಾಷಾ ಹಾಗೂ ಲಾರಿ ಕ್ಲೀನರ್ ಮಹೆಬೂಬ್ ಗಂಭೀರ ಗಾಯಗೊಂಡಿದ್ದು, ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
