ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ, ಮನೆತನದ ಮರ್ಯಾದೆ ತೆಗೆಯುತ್ತಿದ್ದಾಳೆಂದು ಸ್ವಂತ ಮಗಳನ್ನೇ ಕೊಂದ ತಂದೆಯೊಬ್ಬ ಶವವನ್ನು ಕೃಷ್ಣಾ ನದಿಗೆ ಎಸೆದಿದ್ದ ಘಟನೆ ಸುಮಾರು ಎಂಟು ತಿಂಗಳ ನಂತರ ಬೆಳಕಿಗೆ ಬಂದಿದೆ.
ರಾಯಚೂರಿನ ಲಿಂಗಸುಗೂರು ತಾಲೂಕು ಹಂಚಿನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ರೇಣುಕಾ (17) ಮೃತಪಟ್ಟ ಯುವತಿ. ಲಕ್ಕಪ್ಪ ಕಂಬಳಿ ಆರೋಪಿ ತಂದೆ.
ರೇಣುಕಾ ಅದೇ ಗ್ರಾಮದ ಹನುಮಂತ ಎನ್ನುವ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ತಂದೆ ಹಲವು ಬಾರಿ ಬುದ್ಧಿಮಾತು ಹೇಳಿದರೂ ಕೇಳಿರಲಿಲ್ಲ. ಇದರಿಂದ ಮನನೊಂದು ಮಗಳು ಮನೆಬಿಟ್ಟೂ ಹೋಗಿದ್ದಳು. ಮಗಳು ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು. ಕೆಲ ದಿನಗಳ ಬಳಿಕ ಪೊಲೀಸರು ಮಗಳನ್ನು ಹುಡುಕಿ ತಂದೆಗೆ ಒಪ್ಪಿಸಿದ್ದರು. ಇಷ್ಟಾದರೂ ರೇಣುಕಾ ಮಾತ್ರ ತನ್ನ ಹಠ ಬಿಟ್ಟಿಲ್ಲ. ಕುಪಿತಗೊಂಡ ತಂದೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ನಿನ್ನೆ (ಏ.27) ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಾಯಚೂರು | ಕಾಲುವೆಗೆ ಉರುಳಿದ ಟ್ರಾಕ್ಟರ್ ;ಓರ್ವ ಮಹಿಳೆ ಸಾವು ,ಆರು ಜನರಿಗೆ ಗಾಯ