ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಲೈಂಗಿಕ ದೌರ್ಜನ್ಯ ನಡೆಸಿದ ಹಾಗೂ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕೃತ್ಯವನ್ನು ಖಂಡಿಸಿ ವೆಲ್ಫೇರ್ ಪಕ್ಷ ನೇತೃತ್ವದಲ್ಲಿ ಹಲವು ಸಂಘಟನೆಗಳ ಮುಖಂಡರು ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
“ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವು ಮನುಷ್ಯ ಕುಲವೇ ತಲೆತಗ್ಗಿಸುವ ಕೃತ್ಯವಾಗಿದೆ. ಆದರೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ಖಂಡನೀಯ” ಎಂದು ಕೇಂದ್ರ ಹಾಗೂ ಮಣಿಪುರ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ವೆಲ್ಫೇರ್ ಪಕ್ಷದ ರಾಜ್ಯಾದ್ಯಕ್ಷ ತಾಯರ್ ಹುಸೇನ್ ಮಾತನಾಡಿ, “ಕೇಂದ್ರ ಸರ್ಕಾರವು ಮಹಿಳೆಯರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಣಿಪುರದಲ್ಲಿ ಭಯದ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಶಾಂತಿ ಮರು ಸ್ಥಾಪಿಸಬೇಕು. ಹಿಂಸಾಚಾರ ನಡೆದರೂ ಈ ಬಗ್ಗೆ ಪ್ರಧಾನಿಯವರು ಒಂದೇ ಒಂದು ಮಾತನಾಡಿರಲಿಲ್ಲ. ಸುಪ್ರಿಂ ಕೋರ್ಟ್ ಮಧ್ಯ ಪ್ರವೇಶಿಸಿದ ಮೇಲೆ 30 ಸೆಕೆಂಡ್ ಮಾತನಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ ಹಾಗೂ ಮೀಸಲಾತಿ ವಿಚಾರಕ್ಕೆ ಆರಂಭವಾದ ಹೋರಾಟ ಹಿಂಸಾರೂಪ ಪಡೆದುಕೊಂಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಸತಿ ಶಾಲೆ ಪ್ರಾಚಾರ್ಯರ ವಿರುದ್ಧ ಕಿರುಕುಳ ಆರೋಪ; ಕಠಿಣ ಕ್ರಮಕ್ಕೆ ಡಿವಿಪಿ ಆಗ್ರಹ
“ಮಣಿಪುರ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ನೀಡಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮೌಲಾನ್ ಫರೀದ್ ಉಮ್ರಿ, ಕಾರ್ಯದರ್ಶಿ ಸೈಯದ್ ಅನ್ಸಾರಿ, ಉಪಾಧ್ಯಕ್ಷ ಅಬ್ದುಲ್ ಘನಿ, ನಗರಾಧ್ಯಕ್ಷ ತಾರೂಖ್ ಮನಿಯಾರ್ ಹಾಗೂ ಇತರೆ ಸಂಘಟನೆಗಳ ಮುಖಂಡರಾದ ಎಸ್ ಮಾರೆಪ್ಪ ವಕೀಲ, ಖಾಜಾ ಅಸ್ಲಾಂ ಅಹಮದ್, ಜಾನ್ ವೆಸ್ಲಿ ಸೇರಿದಂತೆ ಬಹುತೇಕರು ಹಾಜರಿದ್ದರು.