ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಚಡಕಲುಗುಡ್ಡ ಎಂಬ ಗ್ರಾಮದಲ್ಲಿ ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಅಂಬೇಡ್ಕರ್ ಅವರ ಭಾವಚಿತ್ರವನ್ನ ಹರಿದು ಹಾಕಿ, ವಿಕೃತಿ ಮೆರೆದ ಘಟನೆ ನಡೆದಿದೆ.
ಬೆಳಗ್ಗೆ ಗ್ರಾಮದಲ್ಲಿ ಜನರಿಗೆ ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಜನರು ಹಾಗೂ ಹಲವು ದಲಿತಪರ ಸಂಘಟನೆಗಳು ಸ್ಥಳಕ್ಕೆ ಧಾವಿಸಿ ಅಶಾಂತಿ ಸೃಷ್ಟಿಸಿದ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿ.ಪಿ.ಐ ಗುಂಡೂರಾವ್ ಅವರು ತ್ವರಿತ ಗತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಕೃತ್ಯ ಎಸಗಿದವರ ಹೆಡೆಮುರಿ ಕಟ್ಟಿ ಕಾನೂನು ಶಿಕ್ಷೆಗೆ ಗುರಿಪಡಿಸುವುದಾಗಿ ಭರವಸೆ ನೀಡಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಇ.ಒ ಕೂಡ ಭೇಟಿ ನೀಡಿದ್ದಾರೆ.

ಈ ಉದ್ದೇಶಿಸಿ ಮಾತನಾಡಿದ ದಲಿತ ಹೋರಾಟಗಾರ ರಮೇಶ್ ಭಾವಿಮನಿ, ರಾತ್ರಿ ವೇಳೆ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಬದ್ಧತೆಗಳನ್ನ ಎದುರಿಸಲಾಗದೆ ಕತ್ತಲಲ್ಲಿ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳಿಗೆ ತಕ್ಕ ಕಾನೂನು ಶಿಕ್ಷೆ ಆಗಬೇಕು ಹಾಗೂ ಕ್ರಮ ಕೈಗೊಳ್ಳುವವರೆಗೂ ನಾವು ಬಿಡುವುದಿಲ್ಲ ಎಂದು ಹೇಳಿದರು.
ಶಾಂತಿ ಸೌಹಾರ್ದತೆಯಿಂದ ಬದುಕುತ್ತಿರುವ ಗ್ರಾಮದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಬಾರದು ಎಂದರು.
ಪೊಲೀಸ್ ಇಲಾಖೆಯ ಭರವಸೆ ಹುಸಿಯಾದರೆ ಖಂಡಿತ ತಾಲೂಕಿನಾದ್ಯಂತ ಉಗ್ರ ಹೋರಾಟವನ್ನು ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
