ರಾಯಚೂರು ಜಿಲ್ಲೆಯ ಸಿಂಧನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪಿಡಿಓ ಪರೀಕ್ಷೆ ನಿರ್ವಹಣೆ ಮಾಡುವಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತ ಕ್ರಾಂತಿಕಾರಿ ಯೋಜನೆ ಒಕ್ಕೂಟ (RYFI) ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಕರ್ನಾಟಕ ಲೋಕಸೇವಾ ಆಯೋಗದಿಂದ ಭಾನುವಾರ ಸಿಂಧನೂರು ಸರಕಾರಿ ಮಹಾವಿದ್ಯಾಲಯದಲ್ಲಿ ನಡೆದ ಪಿಡಿಒ ಹುದ್ದೆಗಳ ಪರೀಕ್ಷೆಯಲ್ಲಿ ಕೆಲ ಪರೀಕ್ಷಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಅಭ್ಯರ್ಥಿಗಳು ಪ್ರತಿಭಟನೆ ಮಾಡಿದ್ದರು. ಲೋಪ ಎಸಗಿದ ಅಧಿಕಾರಿಗಳಿಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳು ಉನ್ನತ ಹುದ್ದೆಗೋಸ್ಕರ ಹಗಲು ರಾತ್ರಿ ಕಷ್ಟಪಟ್ಟು, ಸತತ ಪ್ರಯತ್ನ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಿರುತ್ತಾರೆ. ಆದರೆ ಕೆಲವರ ಕುತಂತ್ರಕ್ಕೆ ಸಾವಿರಾರು ಮಕ್ಕಳು ಉನ್ನತ ಹುದ್ದೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಬಾರಿಯು ಕೆ ಪಿ ಎಸ್ ಸಿ ಯಾವುದೇ ಪರೀಕ್ಷೆ ನಡೆಸುವಾಗ ಲೋಪವೆಸಗುವ ಘಟನೆಗಳು ಪದೇ ಪದೇ ನಡೆಯುತ್ತಿವೆ. ಪಿ ಎಸ್ ಐ ಇನ್ನಿತರ ಉದಾಹರಣೆಗಳಿವೆ. ಕೂಡಲೇ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಲೋಪ ಎಸಗಿದ ಅಧಿಕಾರಿಗಳಿಗೆ ಅಮಾನತು ಮಾಡಬೇಕು ಎಂದರು.
ಇದನ್ನು ಓದಿದ್ದೀರಾ? ಶ್ರೀರಂಗಪಟ್ಟಣ | ಪ್ರತಿ ಸಮಸ್ಯೆಗೂ ರೈತರು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ: ಕೆಂಪೂಗೌಡ
ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಧ್ವನಿ ಎತ್ತಿದ್ದಕ್ಕೆ 12 ಅಭ್ಯರ್ಥಿಗಳನ್ನು ಕೇಸು ದಾಖಲಿಸಿ ಒಬ್ಬ ಅಭ್ಯರ್ಥಿಯನ್ನು ಬಂಧಿಸಿದ್ದು ಅಕ್ಷಮ್ಯ ಅಪರಾಧ ಎಂದು ಹೇಳಿದರು. ಕೂಡಲೇ ವಿದ್ಯಾರ್ಥಿಗಳ ಮೇಲೆ ಹಾಕಿದ ಕೇಸ್ ವಾಪಸ್ ಪಡೆದು ಕೂಡಲೇ ಮರು ಪರೀಕ್ಷೆ ನಡೆಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾರತ ಕ್ರಾಂತಿಕಾರಿ ಯೋಜನೆ ಒಕ್ಕೂಟ ಜಿಲ್ಲಾ ಮುಖಂಡ ಅಜೀಜ್ ಜಾಗೀರ್ದಾರ್, ಕಾರ್ಮಿಕ ಮುಖಂಡ ಅಡಿವಿ ರಾವ್, ರವಿಚಂದ್ರ, ರೈತ ಮುಖಂಡ ಸೈಯದ್ ಅಬ್ಬಾಸ್ ಅಲಿ, ಹನೀಫ್ ಅಬಕಾರಿ, ಶಫಿ, ನಲ್ಲಾರೆಡ್ಡಿ, ನರಸಪ್ಪ, ನಾಗರಾಜ್ ಇನ್ನಿತರರು ಹಾಜರಿದ್ದರು.
