ರಾಯಚೂರಿನ ನಾರಾಯಣಪುರ ಬಲದಂಡೆ ಕಾಲುವೆಗೆ ಏಪ್ರಿಲ್ 20ರವರಗೆ ನೀರು ಹರಿಸಲು ಆಗ್ರಹಿಸಿ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದ ವ್ಯಾಪ್ತಿಯ ಅಮರಾಪುರ ಕ್ರಾಸ್ ಬಳಿ ಕರ್ನಾಟಕ ಪ್ರಾಂತ ರೈತ ಸಂಘ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿತು.
“ನಾರಾಯಣಪುರ ಬಲದಂಡೆ ಕಾಲುವೆ ವ್ಯಾಪ್ತಿಯಲ್ಲಿ ಸುಮಾರು 1 ಲಕ್ಷ 20 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಬೆಳೆದಿರುವ ಭತ್ತ, ಮೆಣಸಿನಕಾಯಿ, ಶೇಂಗಾ, ಸಜ್ಜೆ ಸೇರಿ ಇನ್ನಿತರ ಬೆಳೆಗಳು ಕಟಾವಿಗೆ ಬರಲು ಒಂದುವರೆ ತಿಂಗಳು ಸಮಯ ಬೇಕಾಗಿದೆ. ಇನ್ನೂ ಕೆಲ ದಿನಗಳವರೆಗೆ ನೀರು ಹರಿಸದಿದ್ದರೆ ಬೆಳೆ ನಾಶವಾಗಿ ಕೈಗೆ ಬಂದೆ ತುತ್ತು ಬಾಯಿಗೆ ಬರದಂತಾಗುತ್ತದೆ. ಹಾಗಾಗಿ ಏಪ್ರಿಲ್ 20ರವರೆಗೆ ಕಾಲುವೆಗೆ ನೀರು ಹರಿಸಬೇಕು” ಎಂದು ಮನವಿ ಮಾಡಿದರು.
ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಮಾ. 23ಕ್ಕೆ ನೀರು ಸ್ಥಗಿತ ಮಾಡಿದಲ್ಲಿ ಪ್ರಸ್ತುತ ರೈತರು ಬೆಳೆದ ಬೆಳೆ ನಾಶವಾಗಿ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿ ರೈತರು ಸಾಲದ ಸುಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ. ನೀರಾವರಿ ವ್ಯಾಪ್ತಿಯಲ್ಲಿರುವ ಬೆಳೆಗಳನ್ನು ರಕ್ಷಣೆ ಮಾಡುವುದು ಸರ್ಕಾರ ಹಾಗೂ ನೀರಾವರಿ ಇಲಾಖೆಯ ಜವಾಬ್ದಾರಿಯಾಗಿದೆ. ಈಗಾಗಲೇ ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಎರಡನೇ ಬೆಳೆಯೂ ನೀರಿನ ಸಮಸ್ಯೆಯಿಂದ ಕೈ ಕೊಟ್ಟರೆ ರೈತರಿಗೆ ಉಳಿಗಾಲವಿಲ್ಲ” ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ಬೆಳಿಗ್ಗೆಯೇ ರಾಜ್ಯ ಹೆದ್ದಾರಿ ತಡೆದು ರೈತರು ಪ್ರತಿಭಟನೆಗೆ ಮುಂದಾಗಿದ್ದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಪೊಲೀಸರು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಪ್ರತಿಭಟನಾಕಾರರನ್ನು ಕೆಲ ಕಾಲ ಬಂಧಿಸಿದ್ದರಿಂದ ವಾತಾವರಣ ಬಿಗಡಾಯಿಸಿತ್ತು.
ಇದನ್ನೂ ಓದಿ: ರಾಯಚೂರು | ಲಾರಿ-ಬೈಕ್ ಡಿಕ್ಕಿ; ಓರ್ವ ಸಾವು
ಈ ವೇಳೆ ಕೆ ಜಿ ವೀರೇಶ್, ಬಸವರಾಜ ನರೇಗಲ್, ಸಿದ್ದಪ್ಪ ಗುಮೇದಾರ, ಮೌನೇಶ್, ಶಬ್ಬೀರ್, ಸಂಜೀವ ರೆಡ್ಡಿ, ಚಂದಪ್ಪ ಇನ್ನಿತರರು ಹಾಜರಿದ್ದರು.
