ಇತ್ತೀಚೆಗೆ ಪಂಜಾಬ್ ಸರ್ಕಾರ ಅಲ್ಲಿನ ರೈತರ ಮೇಲೆ ನಡೆಸಿದ ದೌರ್ಜನ್ಯ ಖಂಡಿಸಿ ರಾಯಚೂರಿನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ, ಎಲ್ಲಾ ಬೆಳೆಗಳಿಗೆ ಬೆಲೆ ನಿಗದಿ, ರೈತರು ಮತ್ತು ಕಾರ್ಮಿಕರ ಸಾಲ ಮನ್ನಾ ಹಾಗೂ ವಿದ್ಯುತ್ ದರ ಕಡಿಮೆಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂಘಟನೆಯ ಮುಖಂಡರು ಆಗ್ರಹಿಸಿದರು. ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
“ಪಂಜಾಬ್ ರೈತ ಚಳವಳಿಗಾರರ ಮೇಲೆ ನಡೆಸಿದ ದೌರ್ಜನ್ಯದ ಪ್ರಕರಣವನ್ನು ಸೂಕ್ತ ತನಿಖೆಗೆ ಒಳಪಡಿಸಿ ತಪಿತಸ್ಥರ ವಿರುದ್ಧ ಕ್ರಮಕೈಕೊಳ್ಳಬೇಕೆಂದು ಆಗ್ರಹಿಸಿದರು. ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾದ ಯುಎಸ್ ಸೇರಿದಂತೆ ಇತರ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ನಡೆಯುತ್ತಿರುವ ಮಾತುಕತೆಗಳನ್ನು ನಿಲ್ಲಿಸಬೇಕು. ಸರ್ಕಾರಗಳು ಇದನ್ನು ತಿರಸ್ಕರಿಸಬೇಕು ಮತ್ತು ಅದನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ತಿಳಿಸುವ ನಿರ್ಣಯಗಳನ್ನು ಅಂಗೀಕರಿಸಬೇಕು” ಎಂದು ಒತ್ತಾಯಿಸಿದರು.
ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಕೇಂದ್ರ ಸರ್ಕಾರವು ತಕ್ಷಣವೇ ಎಲ್ಲಾ ಬೆಳೆಗಳ ಖರೀದಿಗೆ ಖಾತರಿ ನೀಡಬೇಕು.
ರೈತರು ಮತ್ತು ಕಾರ್ಮಿಕರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು. ಕೃಷಿ ಮತ್ತು ಗ್ರಾಮೀಣ ವಲಯಗಳಲ್ಲಿ ವಿದ್ಯುತ್ ದರ ಹೆಚ್ಚಳ ಮತ್ತು ಸ್ಮಾರ್ಟ್ ಮೀಟರ್ ಹೇರಿಕೆಯನ್ನು ಹಿಂಪಡೆಯಬೇಕು, ಕೊಳವೆ ಬಾವಿಗಳಿಗೆ ಉಚಿತ ವಿದ್ಯುತ್ ಮತ್ತು ಗೃಹ ಬಳಕೆ ಮತ್ತು ಅಂಗಡಿಗಳಿಗೆ 300 ಯುನಿಟ್ ವಿದ್ಯುತ್ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ರಾಯಚೂರು | ಪಿಡಿಓ, ಅಧಿಕಾರ ದುರ್ಬಳಕೆ ಆರೋಪ: ಕೂಲಿ ಕಾರ್ಮಿಕರು ಧರಣಿ
ಈ ವೇಳೆ ಕೆ.ಜಿ.ವಿರೇಶ, ಡಿ.ಎಸ್.ಶರಣಬಸವ, ಮಲ್ಲನಗೌಡ, ಶ್ರೀನಿವಾಸ ಕಲವಲದೂಡ್ಡಿ, ಅಂಜಿನೇಯ್ಯ ಕುರುಬದೊಡ್ಡಿ, ಶ್ರೀನಿವಾಸ ಕೊಪ್ಪರ್, ಮುದಕಪ್ಪ ನಾಯಕ, ಸೇರಿದಂತೆ ಅನೇಕರು ಇದ್ದರು.