ಭೂಮಿಗಳಲ್ಲಿ ಬಗರ್ ಹುಕುಂ ಸಾಗುವಳಿದಾರರು ಸುಮಾರು 40 ರಿಂದ 50 ವರ್ಷಗಳಿಂದ ಫಾರಂ ನಂ: 50, 53, 57 ರಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ. ಕೂಡಲೇ ಜಮೀನುಗಳನ್ನು ತನಿಖೆ ಪರಿಶೀಲನೆ ನಡೆಸಿ ಪಟ್ಟಾ ನೀಡಬೇಕು ಎಂದು ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ವತಿಯಿಂದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ದೇವದುರ್ಗ ತಾಲೂಕಿನ ಜಾಲಹಳ್ಳಿ, ಪರಾಪುರ, ಕಕ್ಕಲದೊಡ್ಡಿ, ಬುದ್ದಿನ್ನಿ ಹೀಗೆ ಹಲವಾರು ಗ್ರಾಮಗಳಲ್ಲಿ ಸರಕಾರಿ ಹೆಸರಿನಲ್ಲಿರುವ ಜಮೀನುಗಳಲ್ಲಿ ಅನಧಿಕೃತವಾಗಿ ಅರ್ಜಿಗಳನ್ನು ಸಲ್ಲಿಸಿ ಸುಮಾರು ವರ್ಷ ಕಳೆದರೂ ಇಲ್ಲಿಯವರೆಗೂ ಪಟ್ಟಾ ನೀಡಿಲ್ಲ ಎಂದು ದೂರಿದರು.

ರಾಜ್ಯದ ಹಲವು ಸಂಘಟನೆಗಳ ಸತತ ಹೋರಾಟದ ಒತ್ತಾಯದ ಪ್ರತಿಫಲವಾಗಿ ಸರಕಾರಿ ಗೋಮಾಳ, ಗೈರಾಣಿ, ಖರೇಜಾ ಖಾತ, ಪರಂಪೋಕ, ‘ಇನಾಮ್ ಹೆಸರಿನಲ್ಲಿರುವ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಾ ಸಕ್ರಮಕ್ಕಾಗಿ ಅರ್ಜಿ ಸಲ್ಲಿಕೆಗೆ ಸರ್ಕಾರ ಅವಕಾಶ ಕಲ್ಪಿಸಿದ್ದು, ಅದರ ತರುವಾಯ ಭೂಮಿಯ ಹಕ್ಕಿಗಾಗಿ ಹಲವಾರು ಬಾರಿ ಜಿಲ್ಲಾಡಳಿತಕ್ಕೆ ಮತ್ತು ತಾಲೂಕಾಡಳಿತ ಕಛೇರಿಗಳ ಮಾತ್ರ ಅಲೆದಾಟ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಲಕಾಲಕ್ಕೆ ಭೂ ಮಂಜೂರಾತಿ ಸಮಿತಿಯು ಸಭೆಗಳನ್ನು ನಡೆಸಲು ಸರ್ಕಾರದ ಆದೇಶವಿದ್ದರೂ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂದು ದೂರಿದರು. ಸರ್ಕಾರ ಸುತ್ತೋಲೆಗಳನ್ನು ಕಟುಬದ್ಧವಾಗಿ ಮತ್ತು ಪ್ರಾಮಾಣಿಕತೆಯಿಂದ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಅನಧಿಕೃತ ಸಾಗುವಳಿದಾರರ ಸಕ್ರಮಕ್ಕೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಕೂಡಲೇ ನವೆಂಬರ್- 25’ರ ಒಳಗೆ ರೈತರ ಜಮೀನುಗಳ ಜಿ.ಪಿ.ಎಸ್ ಫೋಟೋ ಮತ್ತು ಸ್ಥಾನಿಕ ಪರಿಶೀಲನೆ ನಡೆಸುವಂತೆ ಸಂಬಂಧಿಸಿದ ಸಚಿವರು ಹೇಳಿದ್ದಾರೆ. ಅದರ ಹಿನ್ನಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕೂಡಲೇ ರೈತರ ಜಮೀನುಗಳ ಅರ್ಹ ಫಲಾನುಭವಿಗಳ ಪಟ್ಟಿ ಮಾಡುವಂತೆ ಮನವಿ ಮಾಡಿದರು.
ಪ್ರತಿಭಟನೆಯ ಬಳಿಕ ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ ಹಾಗೂ ತಹಶೀಲ್ದಾರ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.
ಇದನ್ನು ಓದಿದ್ದೀರಾ? ಕೊಪ್ಪಳ | ರೈತರ ನಾನಾ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ
ಈ ವೇಳೆ ಕರ್ನಾಟಕ ಜನಶಕ್ತಿ ಮುಖಂಡ ಮಾರೆಪ್ಪ ಹರವಿ, ಭೂಮಿ ವಸತಿ ಜಿಲ್ಲಾ ಮುಖಂಡ ಆಂಜನೇಯ ಕುರುಬದೊಡ್ಡಿ, ಗ್ರಾಮಿಣ ಕೂಲಿಕಾರರ ಸಂಘಟನೆ ಮುಖಂಡ ಬಸವರಾಜ್ ಗಬ್ಬೂರು , ಹನುಮಂತ ಜೋಗಿ , ಶಿವಪ್ಪ ಬಲ್ಲಿದ , ಶಿವರಾಜ್ ರುದ್ರಾಕ್ಷಿ, ಬಸವರಾಜ್ ನಾಯಕ , ಇನ್ನಿತರರು ಹಾಜರಿದ್ದರು.
