ಅಮೃತ ಭಾರತ ಯೋಜನೆಯಡಿಯಲ್ಲಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು, ರಾಯಚೂರು ಭಾಗದಲ್ಲಿ ನೆನೆಗುದಿಗೆ ಬಿದ್ದ ರೈಲ್ವೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ, ರಾಯಚೂರು ಸುತ್ತಲೂ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಿಂದ ಜಿಲ್ಲೆಯು ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ರಾಯಚೂರು ನಗರದ ರೈಲ್ವೆ ನಿಲ್ದಾಣದಲ್ಲಿ, ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ 554ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಸುಮಾರು 41 ಸಾವಿರ ಕೋಟಿ ರೂ. ಅಮೃತ ಭಾರತ ಯೋಜನೆಯಡಿಯಲ್ಲಿ ಕಾಮಗಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ, ರಾಯಚೂರು ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ 21ಕೋಟಿ ಹಾಗೂ ಯಾದಗಿರಿ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ 17 ಕೋಟಿ 30 ಲಕ್ಷ ರೂ. ನೀಡಿದ್ದಾರೆ ಎಂದರು.
ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ವಿಶ್ರಾಂತಿ ಗೃಹ, ಮುಂಭಾಗದಲ್ಲಿ ಸ್ವಾಗತ ಬೋರ್ಡ್, ಶೌಚಾಲಯ, ಕುಡಿಯುವ ನೀರು ಹಾಗೂ ಗೂಡ್ ಶೆಡ್‌ನ್ನು ಯರಮರಸ್‌ಗೆ ಸ್ಥಳಾಂತರ ಮಾಡಲಾಗುತ್ತದೆ, ರೈಲ್ವೆ ಮೇಲ್ಸೇತುವೆ ನಿರ್ಮಾಣದಿಂದ ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮಟಮಾರಿ ರೈಲ್ವೆ ನಿಲ್ದಾಣದ ಹತ್ತಿರ ಅಂಡರ್ ಪಾಸ್ ರಸ್ತೆ ನಿರ್ಮಾಣದಿಂದ ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗಿದೆ, ಮನ್ಸಲಾಪೂರ ಗೇಟ್ ರಸ್ತೆಯಲ್ಲಿ ಸಾಕಷ್ಟು ವಾಹನಗಳ ಸಂಚಾರವಿದ್ದು ಅಂಡರ್ ಪಾಸ್ ರಸ್ತೆ, ನಿರ್ಮಾಣ ಮಾಡಲಾಗುತ್ತದೆ, ಗಿಣಗೇರಾ-ಮಹಿಬೂಬ್ ನಗರ ರೈಲ್ವೆ ಯೋಜನೆ ಸಿಂಧನೂರುವರೆಗೆ ಬಂದಿದೆ, ರಾಯಚೂರು ಹಿರೇ ಕೊಟ್ನೇಕಲ್ ವರೆಗೆ 750 ಕೋಟಿ ಟೆಂಡರ್ ಆಗಿದೆ, ಕಾಮಗಾರಿ ಪ್ರಾರಂಭವಾಗಬೇಕಿದೆ, ಗದಗ-ವಾಡಿ ರೈಲ್ವೆ ಯೋಜನೆಗೆ ರೈತರಿಗೆ ಪರಿಹಾರ ನೀಡುವ ಕೆಲಸ ನಡೆದಿದೆ, ಶಹಾಪೂರ, ಸುರಪೂರ ಮಾರ್ಗದಲ್ಲಿ 551 ಕೋಟಿ ಟೆಂಡರ್ ಕರೆಯಲಾಗಿದೆ ಎಂದರು.
ಅಕ್ಕಲಕೋಟೆ-ಕರ್ನೂಲ್ 06 ಲೈನ್ ರಸ್ತೆ ಕಾಮಗಾರಿ ನಿರ್ಮಾಣ ವೇಗವಾಗಿ ನಡೆಯುತ್ತಿದೆ, ರಾಯಚೂರು ಭಾಗದಲ್ಲಿ 3 ಪ್ಯಾಕೇಜ್‌ನಲ್ಲಿ 2 ಪ್ಯಾಕೇಜ್ ಶೀಘ್ರವಾಗಿ ಆರಂಭವಾಗಲಿದೆ, ಬೆಳಗಾವಿ-ರಾಯಚೂರು ಚತುಸ್ಪಥ ರಸ್ತೆ ನಿರ್ಮಾಣ, ರಾಯಚೂರು ಸುತ್ತಲೂ ಚತುಷ್ಪಥ ರಸ್ತೆ ನಿರ್ಮಾಣದಿಂದ ನಗರದಲ್ಲಿ ವಾಹನಗಳ ಸಂಚಾರ ಕಡಿಮೆಯಾಗಲಿದೆ, ಜೊತೆಗೆ ನಗರ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಈ ಭಾಗದಲ್ಲಿ ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ 30 ಸಾವಿರ ಕೋಟಿ 5 ವರ್ಷದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಮಾಡಲಾಗಿದೆ, ರಾಯಚೂರು ಯಾದಗಿರಿ ಜಿಲ್ಲೆಗಳ ಅಭಿವೃದ್ಧಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ರೈಲ್ವೆ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳು ಮಾಡುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯ ಎನ್. ಶಂಕ್ರಪ್ಪ, ಸ್ವಾತಂತ್ರ‍್ಯ ಹೋರಾಟಗಾರ ಡಿ.ಪಂಪಣ್ಣ, ಗುಂತಕಲ್ ರೈಲ್ವೆ ವಿಭಾಗದ ಡಿ.ಎಂ. ವಿನಯ ಸಿಂಗ್, ರಾಮಕೃಷ್ಣ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಥೆ ಸ್ಮಿತಾ ಅಕ್ಕ, ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.