ರೈಲು ಮೂಲಕ ಪೂರೈಕೆಯಾಗುವ ರಸಗೊಬ್ಬರ ಪೂರೈಸುವ ಲಾರಿ ಮಾಲೀಕರಿಗೆ ಜಿ.ಕೆ. ಲಾಜಿಸ್ಟಿಕ್ ಗ್ರೂಪ್‌ನಿಂದ ಕಳೆದ ಐದು ವರ್ಷಗಳಿಂದ ಬಾಡಿಗೆ ಬಾಕಿ ಉಳಿದಿದ್ದು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಲಾರಿ ಓನರ್ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ಹಸನ್ ಅರೋಪಿಸಿದರು.
ಕಲಬುರಗಿಯಲ್ಲಿ ಇಂದು (ಏ.2) ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿ.ಕೆ. ಲಾಜಸ್ಟಿಕ್ ಗ್ರೂಪ್ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಬ್ಬರ ಪೂರೈಸುವ ಗುತ್ತಿಗೆ ಪಡೆದಿದೆ. ಕಳೆದ ಎರಡು ವರ್ಷಗಳಿಂದ ಸಮರ್ಪಕವಾಗಿ ಲಾರಿ ಬಾಡಿಗೆ ಪಾವತಿಸುತ್ತಿಲ್ಲ. ಡಿಸೇಲ್ ದರಗಳ ಏರಿಕೆಯಾಗಿರುವುದರಿಂದ ವಾಹನಗಳ ದುರಸ್ತಿ, ನಿರ್ವಹಣೆ ಮಾಡಲಾಗದ ಸ್ಥಿತಿಯಲ್ಲಿ ಲಾರಿ ಮಾಲೀಕರು ಸಿಲುಕಿದ್ದಾರೆ ಎಂದರು.
ಗುತ್ತಿಗೆ ಪಡೆದಾಗ ಮಾಡಿಕೊಂಡಿರುವ ಒಪ್ಪಂದದಂತೆ ಐದಾರು ದಿನಗಳಲ್ಲಿ ಪಾವತಿಸುವ ಒಪ್ಪಂದವಾಗಿದೆ. ಆದರೆ ವರ್ಷಗಳಿಂದ ಲಕ್ಷಾಂತರ ಹಣ ಬಾಕಿಯಿದೆ. ಜಿ.ಕೆ. ಲಾಜಸ್ಟಿಕ್ ಗ್ರೂಪ್‌ನಿಂದ ನೀಡಲಾಗಿರುವ ಚೆಕ್ ಬೌನ್ಸ್ ಆಗಿದೆ. ಕೂಡಲೇ ಬಾಕಿಯಿರುವ ಹಣ ಪಾವತಿಸದೇ ಇದ್ದಲ್ಲಿ ಪೂರೈಕೆ ಸ್ಥಗಿತಗೊಳಿಸಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತೌಫೀಕ್ ಹುಸೇನ್, ಅಜೀಂ ಪಾಷಾ, ಚಂದ್ರಶೇಖರ ಉಪಸ್ಥಿತರಿದ್ದರು.
