ಉತ್ತರಪ್ರದೇಶದಲ್ಲಿ ತಯಾರಿಸಿದ ಗಾಂಜಾ ಚಾಕೊಲೇಟ್‌ಗಳನ್ನು ರಾಯಚೂರಿನಲ್ಲಿ ಮಾರಾಟ ಮಾಡಲಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆಯ ಅಧಿಕಾರಿಗಳು ಗಾಂಜಾ ಚಾಕೊಲೇಟ್ ಮಾರುತ್ತಿದ್ದ ಅರೋಪಿಗಳನ್ನು ಬಂಧಿಸಿ ಗಾಂಜಾ ಚಾಕೊಲೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಚಯ್ಯ ಸ್ವಾಮಿ ಹಾಗೂ ಅಂಬರಯ್ಯ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದ್ದು, ಚಾಕೊಲೇಟ್‌ನಂತೆ ಗಾಂಜಾ ತಯಾರಿಸಿ 6 ಗ್ರಾಂ ತೂಕದ ಗಾಂಜಾ ಚಾಕೊಲೇಟ್‌ಗಳನ್ನು ₹30, ₹50, ₹400ಕ್ಕೆ ಅಂಗಡಿಗಳಲ್ಲಿಯೇ ಮಾರಾಟ ಮಾಡಲಾಗುತ್ತಿತ್ತು. ನಗರದ ಎಲ್‌ಬಿಎಸ್ ನಗರ ಬಡಾವಣೆ ಮತ್ತು ಕೈಗಾರಿಕಾ ಪ್ರದೇಶದ ಏರಿಯಾಗಳಲ್ಲಿ ಹಲವು ದಿನಗಳಿಂದ ಯಾವುದೇ ಅನುಮಾನ ಬಾರದ ರೀತಿಯಲ್ಲಿ ಗಾಂಜಾ ಮಾರಾಟ ಮಾಡಲಾಗುತಿತ್ತು ಎನ್ನಲಾಗಿದೆ.
ಗಾಂಜಾ ಮಾರಾಟದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಶ್ರೀಪಾನಾ ಮುನಾಕಾ, ಶ್ರೀ ಆನಂದ ಮುನಾಕಾ ಚಾಕೊಲೇಟ್ ಪತ್ತೆಯಾಗಿವೆ. ಒಟ್ಟು 482 ಗಾಂಜಾ ಚಾಕೊಲೇಟ್‌ಗಳನ್ನು ಜಪ್ತಿಪಡಿಸಿಕೊಳ್ಳಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಕ್ರಮ ಒತ್ತುವರಿ ತೆರವಿಗೆ ಆಗ್ರಹ
ಅಬಕಾರಿ ಪೊಲೀಸರು ಬಂಧಿತ ಆರೋಪಿಗಳಿಂದ ಮಾಹಿತಿ ಕಲೆಹಾಕಿದ್ದು, ಮೂಲ ಹುಡುಕಾಟ ನಡೆಸಿದ್ದಾರೆ. ಸದ್ಯ ರಾಯಚೂರಿನ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ವಾಲೆಂಟಿಯರ್ ಹಫೀಜುಲ್ಲಾ ಮಹಿತಿ ಆಧರಿಸಿದ ವರದಿ