ಬೌದ್ಧ ಸಮುದಾಯದ ಹಲವು ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ನವೆಂಬರ್ 15ರಿಂದ ನಡೆದ ಸನ್ನತಿ ಪಂಚಶೀಲ ಪಾದಯಾತ್ರೆಯು ಜನವರಿ 24ರಂದು ಬೆಂಗಳೂರಿಗೆ ತಲುಪಲಿದ್ದು, ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆ ಮೂಲಕ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಧಮ್ಮದೀಪ ಚಾಲನಾ ಸಮಿತಿ ಹಿರಿಯ ಮುಖಂಡ ಮಲ್ಲೇಶಪ್ಪ ಹುನುಗುಂದಬಾಡ್ ಹೇಳಿದರು.
ರಾಯಚೂರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ನಾಡಿನ ಭಿಕ್ಕು ಮತ್ತು ಬಿಕ್ಕುಣಿ ಸಂಘದ ಪೂಜ್ಯ ಭಂತೆ ಭೋಧಿದತ್ತ ನೇತೃತ್ವದಲ್ಲಿ ಡಿಸೆಂಬರ್ 15 ರಂದು ಸನ್ನತಿಯಿಂದ ಪ್ರಾರಂಭವಾದ ಪಂಚಶೀಲ ಪಾದಯಾತ್ರೆ ಕಲಬುರಗಿ, ಯಾದಗಿರ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಗ್ರಾಮದಿಂದ ಸರಿ ಸುಮಾರು 800 ಕಿಮೀ ಜನಜಾಗೃತಿ ಮೂಡಿಸುವ ಮೂಲಕ 23ರಂದು ಯಶವಂತಪುರ ಮಾರ್ಗವಾಗಿ ಡಾ ಬಿ ಆರ್ ಅಂಬೇಡ್ಕರ್ ಅವರ ಕನಸಿನ ದಕ್ಷಿಣ ಭಾರತ ಧಮ್ಮ ಕೇಂದ್ರವಾದ ನಾಗಸೇನ ಬುದ್ಧ ವಿಹಾರ ಸದಾಶಿವ ನಗರ ತಲುಪಿ ವಾಸ್ತವ್ಯ ಮಾಡಲಾಗುತ್ತಿದೆ” ಎಂದರು.
“ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ ಸನ್ನತಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯನ್ನು ಆಂಧ್ರಪ್ರದೇಶದ ಬುದ್ಧವನ ಮಾದರಿಯಲ್ಲಿ ಕನಿಷ್ಠ 200 ಎಕರೆ ಪ್ರದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿ ಸನ್ನತಿಯನ್ನು 7 ಸ್ಟಾರ್ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಬೇಕು” ಎಂದು ಒತ್ತಾಯಿಸಿದರು.
“ಪರಿಶಿಷ್ಟ ಜಾತಿಯ ಬೌದ್ಧರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಬೌದ್ಧರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಕನಿಷ್ಠ ₹1000 ಕೋಟಿ ಅನುದಾನವನ್ನು ಈ ಬಜೆಟ್‍ನಲ್ಲಿ ಘೋಷಣೆ ಮಾಡಬೇಕು. ಪ್ರತಿವರ್ಷ ಮಹಾತ್ಮ, ಗೌತಮ ಬುದ್ಧ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಗವಿಮಠದ ಜಾತ್ರೆ ಸಂಪನ್ನ | ಭಕ್ತರ ಮುಂದೆ ಕಣ್ಣೀರಿಟ್ಟು ಮೂರು ಮನವಿ ಮುಂದಿಟ್ಟ ಗವಿಸಿದ್ದೇಶ್ವರ ಶ್ರೀಗಳು
“ಬೋಧ ಗಯಾ ಟೆಂಪಲ್ ಕಾಯಿದೆ-1949ನ್ನು ರದ್ದುಗೊಳಿಸಿ ಬೋಧ ಗಯಾದ ಮಹಾಬೋಧಿ, ಮಹಾ ವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮತ್ತು ಬಿಹಾರ ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡಬೇಕು” ಎಂದು ಹೇಳಿದರು.
“ಕರ್ನಾಟಕ ಸರ್ಕಾರ ಪ್ರತಿ ವರ್ಷ ಫೆಬ್ರವರಿ 12ರಂದು ಸಾಮ್ರಾಟ್ ಅಶೋಕ ಸನ್ನತಿ ಉತ್ಸವವನ್ನು ಸರ್ಕಾರದಿಂದ ಆಚರಣೆ ಮಾಡಬೇಕು ಎಂಬುದು ಸೇರಿದಂತೆ ಸರಿ ಸಮಾರು 10 ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರು ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಈ ಸಮಾವೇಶಕ್ಕೆ ಹೋಗಲು ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ” ಎಂದು ತಿಳಿಸಿದರು.
“ಸಮಾರೋಪ ಸಮಾರಂಭದಲ್ಲಿ ಸುಮಾರು ಹತ್ತುಸಾವಿರ ಜನಸಂಖ್ಯೆ ಸೇರಲಿದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನರಸಪ್ಪ ವಕೀಲ ಚಿಂಚೋಡಿ, ಮಹಾಂತೇಶ ಭವಾನಿ, ಮಲ್ಲಿಕಾರ್ಜನ್ ಮಸರಕಲ್, ರಾಮಣ್ಣ ಭವಾನಿ ಇದ್ದರು.
