ಪಡಿತರ ಚೀಟಿಯ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಸರ್ವರ್ ಸಮಸ್ಯೆ ಎದುರಾಗಿದ್ದು, ತಿದ್ದುಪಡಿಗಾಗಿ ಅವಧಿ ವಿಸ್ತರಿಸಬೇಕು ಎಂದು ಸಿಪಿಐಎಂಎಲ್ (ರೆಡ್ ಸ್ಟಾರ್) ರಾಯಚೂರು ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಸಿಪಿಐಎಂಎಲ್ (ರೆಡ್ ಸ್ಟಾರ್) ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
“ರಾಜ್ಯ ಸರ್ಕಾರದಿಂದ ಆಗಸ್ಟ್ 18 ರಿಂದ 23 ರವರೆಗೆ ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅವಕಾಶ ನೀಡಿದೆ. ಆದರೂ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ ಮಾತ್ರ ಅರ್ಜಿ ಹಾಕಲು ಅವಕಾಶ ನೀಡಲಾಗಿರುವುದ ಸರಿಯಾದ ಬೆಳವಣಿಗೆಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಿಗದಿತ ಕಾಲಾವಕಾಶದಲ್ಲಿ ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆ ಉಂಟಾಗಿದೆ. ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಸರ್ವರ್ ಕೆಲಸ ಮಾಡುತ್ತಿಲ್ಲ. ಈ ಸಮಸ್ಯೆಯಿಂದ ಬಡ ಜನರಿಗೆ ಹಾಗೂ ಕೂಲಿ ಕಾರ್ಮಿಕರಿಗೆ, ರೈತಾಪಿ ವರ್ಗದವರಿಗೆ ತುಂಬಾ ಸಮಸ್ಯೆ ಎದುರಾಗುತ್ತಿದೆ. ಇಡೀ ದಿನ ಕೆಲಸ ಬಿಟ್ಟು ಸೈಬರ್ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತರೂ, ಸರ್ವರ್ ಇಲ್ಲದ ಕಾರಣ ಇಡೀ ದಿನದ ಅವರ ಕೆಲಸ ವ್ಯರ್ಥವಾಗುತ್ತಿದೆ” ಎಂದು ದೂರಿದರು.
“ರಾಜ್ಯ ಸರ್ಕಾರ ಹಾಗೂ ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು. ಸರ್ವರ್ ಸಮಸ್ಯೆಯನ್ನು ಬಗೆಹರಿಸಿ ಬಡಜನರ ಹಿತವನ್ನು ಕಾಪಾಡಬೇಕು” ಎಂದು ಒತ್ತಾಯಿಸಿದರು.
“ಆಹಾರ ಮತ್ತು ನಾಗರಿಕ ಇಲಾಖೆಯು ಪಡಿತರ ಚೀಟಿಯ ತಿದ್ದುಪಡಿ ದಿನಾಂಕವನ್ನು ಒಂದು ವಾರಕ್ಕೆ ವಿಸ್ತರಿಸಬೇಕು. ಪಡಿತರ ಚೀಟಿಯಲ್ಲಿನ ತಿದ್ದುಪಡಿ, ಅರ್ಜಿ ಹಾಕಲು 24 ಗಂಟೆ ಅವಕಾಶ ನೀಡಬೇಕು. ಆಹಾರ ಮತ್ತು ನಾಗರಿಕ ಇಲಾಖೆಯ ಹೋಬಳಿ ಮಟ್ಟದಲ್ಲಿ ಸರ್ವರ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಗೃಹಲಕ್ಷ್ಮಿ | ಚಾಲನಾ ಕಾರ್ಯಕ್ರಮ ಸ್ಥಳಾಂತರ; ಸತೀಶ್ ಜಾರಕಿಹೊಳಿ ಅಸಮಾಧಾನ
“ಪಡಿತರ ಚೀಟಿ ತಿದ್ದುಪಡಿ ಹೆಸರಿನಲ್ಲಿ ಭಾರೀ ಅಕ್ರಮ ನಡೆಯುತ್ತಿದ್ದು, ಇದನ್ನು ತಡೆಗಟ್ಟಬೇಕು. ಪಡಿತರ ಚೀಟಿ ತಿದ್ದುಪಡಿ ಖಾಸಗಿ ಸೈಬರ್ ಕೇಂದ್ರಗಳು ದುಬಾರಿ ಹಣ ಸುಲಿಗೆ ಮಾಡುತ್ತಿವೆ. ಇದನ್ನು ಕೂಡಲೇ ನಿಲ್ಲಿಸಬೇಕು” ಎಂದು ಮನವಿ ಮಾಡಿದರು.
ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರುಗಳಾದ ಜಿ ಅಮರೇಶ್, ಅಜೀಜ್ ಜಾಗೀರ್ದಾರ್, ಸೈಯದ್ ಅಬ್ಬಾಸ್ ಅಲಿ, ಅಡಿವಪ್ಪ, ಬದ್ರಿ ಇದ್ದರು.