ಕ್ರೀಡೆಗಳು ಯುವಜನರಲ್ಲಿ ಹೆಚ್ಚಾಗಿ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಲಿವೆ ಎಂದು ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್ ಅಭಿಪ್ರಾಯಪಟ್ಟರು.
ರಾಯಚೂರು ತಾಲೂಕಿನ ಮನ್ಸಲಾಪುರ ಗ್ರಾಮದಲ್ಲಿ ಕ್ರಾಂತಿಕಾರಿ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಸೌಹಾರ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಸಮಾಜದಲ್ಲಿ ಮೊಬೈಲ್ ಒಂದು ಚಟವಾಗಿ ಪರಿಣಮಿಸಿದೆ. ಯುವಜನರು ಅದರ ಪ್ರಭಾವದಿಂದ ತಮ್ಮ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುವಂತಹ ವಾತಾವರಣ ನಿರ್ಮಾಣವಾಗಿದೆ. ಅಂತಹ ಪರಿಸ್ಥಿತಿ ಬದಲಾಗಬೇಕು. ಆದರ್ಶಗಳ ಕೊರತೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ನೇತಾಜಿಯವರ ವಿಚಾರ, ಹೋರಾಟದ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಅವರ ಜೀವನದ ಘಟನೆಗಳು ನಮ್ಮ ಯುವಜನರಿಗೆ ಸ್ಪೂರ್ತಿ ನೀಡುತ್ತವೆ” ಎಂದರು.
ಐಸಿಎಸ್ ಪರೀಕ್ಷೆ ಪಾಸಾದರೂ ಅದನ್ನು ತೊರೆದು ಹೋರಾಟದ ರಣರಂಗಕ್ಕೆ ಧುಮುಕಿದ ಮಹಾನ್ ವೀರ ಸುಭಾಷರು. ಬರೀ ಸ್ವಾತಂತ್ರ್ಯ ಪಡೆಯುವುದು ಅಷ್ಟೇ ಅಲ್ಲದೆ ಮಾನವನಿಂದ ಮಾನವನ ಶೋಷಣೆ ಇಲ್ಲದ ಸರ್ವ ಸಮಾನತೆಯ ಸಮಾಜದ ನಿರ್ಮಾಣದ ಕನಸನ್ನು ಕಂಡಿದ್ದರು. ಇಂದಿನ ಯುವಜನರು ಅವರ ವಿಚಾರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮ ಜರುಗಿಸುವಂತೆ ಸಿಪಿಐಎಂಎಲ್ ಆಗ್ರಹ
ಬಳಿಕ 2000 ಮೀಟರ್ ಓಟ, ವಾಲಿಬಾಲ್ ಸೇರಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಐಡಿವೈಓ ಸಂದೀಪ್, ಗ್ರಾಮದ ಯುವಕರಾದ ನರಸಿಂಹ, ತಿಮ್ಮಾರೆಡ್ಡಿ, ಸತೀಶ್, ಮಂಜು ಮುಂತಾದವರು ಇದ್ದರು.
