ಮುಖ್ಯ ಶಿಕ್ಷಕಿ ದುರ್ವರ್ತನೆ ತೋರುತ್ತಿರುವುದರಿಂದ ಶಾಲೆಯಲ್ಲಿದ್ದ ಇತರೆ ಶಿಕ್ಷಕರು ಕೆಲಸ ತೊರೆಯುತ್ತಿದ್ದಾರೆ. ಇದರಿಂದಾಗಿ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ, ಕೂಡಲೇ ಮುಖ್ಯ ಶಿಕ್ಷಕಿಯನ್ನು ಕೆಲಸದಿಂದ ತೆಗೆಯಬೇಕು. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮುಂಡರಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಅವರು ಶಾಲೆಯಲ್ಲಿ ಗುಂಪುಗಾರಿಕೆ, ಸರ್ವಾಧಿಕಾರದಿಂದ ಆಡಳಿತ ನಡೆಸುತ್ತಿದ್ದಾರೆ. ಶಾಲಾ ಅಭಿವೃದ್ಧಿ ಕಡೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಬೇಸತ್ತು ಹಾಗೂ ಮುಖ್ಯ ಶಿಕ್ಷಕಿಯ ಕಿರುಕುಳದಿಂದ ನಾಲ್ಕು ಶಿಕ್ಷಕರು ಶಾಲೆಯಿಂದಲೇ ರಾಜೀನಾಮೆ ನೀಡಿದ್ದಾರೆ. ಶಾಲೆಯಲ್ಲಿ ಶಿಕ್ಷಕರಿಲ್ಲದೆ ಮಕ್ಕಳ ಬೋಧನೆ ಕುಂಟಿತಗೊಳ್ಳುತ್ತಿದೆ. ಇದರಿಂದಾಗಿ ಪ್ರತಿಭಟನೆ ನಡೆಸುವ ಅನಿವಾರ್ಯತೆ ಬಂದೊದಗಿದೆ ಎಂದು ಮುಂಡರಗಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಅವರ ಆಡಳಿತ ಸರ್ವಾಧಿಕಾರದಿಂದ ನಡೆಸುತ್ತಿದ್ದಾರೆ. ಶಾಲೆಯ ಇನ್ನಿತರ ಕೆಲಸದ ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಗಮನಕ್ಕೆ ತಂದರೂ, ಸುಮ್ಮನಿರುತ್ತಿಲ್ಲ. ಎರಡು ದಿನದ ಹಿಂದೆ ನಾಲ್ಕು ಜನ ಅತಿಥಿ ಶಿಕ್ಷಕರು ಮುಖ್ಯ ಶಿಕ್ಷಕಿ ಕಿರುಕುಳಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದರು.
ಶಿಕ್ಷಕಿಯ ವರ್ತನೆಗೆ ಬೇಸತ್ತು ಮಕ್ಕಳು ಕಣ್ಣೀರು ಹಾಕಿ ಶಾಲೆಯಿಂದ ಹೊರ ನಡೆದಿದ್ದಾರೆ. ಶಾಲೆಯಲ್ಲಿ ಅತಿಥಿ ಶಿಕ್ಷಕರಿಗೆ ಮೂರು ತಿಂಗಳು ಕೆಲಸ ಮಾಡಲು ಬಿಡುತ್ತಿಲ್ಲ. ಮುಖ್ಯ ಶಿಕ್ಷಕಿ ಸರ್ವಾಧಿಕಾರಿಯಾಗಿ ದುರ್ವತನೆ ತೋರುತ್ತಿದ್ದಾರೆ. ಅವರ ಪತಿ ಸಿಬ್ಬಂದಿಯೂ ಅಲ್ಲ, ಪಾಲಕರು ಅಲ್ಲ. ಆದರೂ, ಶಾಲೆಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು.
ಮುಖ್ಯ ಶಿಕ್ಷಕಿ ಗೀತಾ ಮನ ಬಂದಂತೆ ಮಾತನಾಡುವ ಮೂಲಕ ವಿದ್ಯಾರ್ಥಿಗಳನ್ನು ನಿಂದಿಸುತ್ತಿದ್ದಾರೆ. ಶೈಕ್ಷಣಿಕ ಅಭಿವೃದ್ಧಿಗೆ ಅವರು ಕೆಲಸ ಮಾಡುತ್ತಿಲ್ಲ. ಕರ್ತವ್ಯದ ವೇಳೆ ದುರ್ನಡತೆ ತೋರುತ್ತಿರುವ ಬಗ್ಗೆ ಪಾಲಕರಿಗೆ ತಿಳಿಸಿದರೆ ವರ್ಗಾವಣೆ ಪ್ರಮಾಣ ಪತ್ರ ನೀಡುವುದಾಗಿ ಬೆದರಿಸುತ್ತಿದ್ದಾರೆ. ಮುಖ್ಯ ಶಿಕ್ಷಕಿ ದುರ್ನಡತೆಗೆ ಶಾಲೆಗೆ ಬರಲು ಭಯವಾಗಿದ್ದು, ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು. ಅಲ್ಲಿಯವರೆಗೆ ಎಸ್ ಡಿ ಎಂ ಸಿ ರಚನೆಗೆ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಹೋಟೆಲ್ ಮೇಲೆ ದಾಳಿ: ಬಾಲ ಕಾರ್ಮಿಕನನ್ನು ರಕ್ಷಿಸಿ ಶಾಲೆಗೆ ಸೇರಿಸಿದ ಅಧಿಕಾರಿಗಳು
ಗೀತಾ ಮೇಡಂ ರವರು ತಕ್ಷಣ ವರ್ಗಾವಣೆ ಮಾಡಬೇಕೆಂದು ಆರು ತಿಂಗಳ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಶಾಲಾ ಮಕ್ಕಳ ಮುಂದಿನ ಭವಿಷ್ಯಕ್ಕೆ ಅಧಿಕಾರಿಗಳೇ ಹೊಣೆಯಾಗಿರುತ್ತಾರೆಂದು ಎಂದು ಗ್ರಾಮಸ್ಥರು ತಿಳಿಸಿದರು.
ಮಲ್ಲಯ್ಯ ಕಟ್ಟಿಮನಿ ಶಿವರಾಜ್ ತಳವಾರ್, ಮಾರುತಿ, ಶರಣಬಸವ, ಶಿವರಾಜ್ ಭಟ್ಟರ್, ಶಿವಪ್ಪ ದನಕಾಯ, ಹನುಮಂತ ಹದಿನಾಳ ಮತ್ತು ಇನ್ನಿತರರು ಇದ್ದರು.
