ಸುಸಜ್ಜಿತವಾದ ಓವರ್ ಟ್ಯಾಂಕ್ ಇದ್ದರೂ ಜನರಿಗೆ ಕುಡಿಯೋಕೂ ನೀರಿಲ್ಲದ ಪರಿಸ್ಥಿತಿ ಇದೆ. ಮನೆ ಮನೆಗೂ ನಲ್ಲಿ ಇದ್ದರೂ ಹೆಸರಿಗೆ ಮಾತ್ರ ಕಾಮಗಾರಿಯಾಗಿದೆ. ಕುಡಿಯುವ ನೀರಿಗಾಗಿ ಇಡೀ ಗ್ರಾಮ ಪರದಾಡುತ್ತಿದೆ.
ರಾಯಚೂರಿನ ದೇವದುರ್ಗ ತಾಲೂಕಿನ ಗಲಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರುಬರದೊಡ್ಡಿ ಗ್ರಾಮದಲ್ಲಿ ಸುಮಾರು ಮೂರು ವರ್ಷಗಳಿಂದ ನೀರಿಲ್ಲದೆ ಜನರು ದಿನನಿತ್ಯ ಮೂರ್ನಾಲ್ಕು ಕಿಮೀ ನಿಂದ ನೀರು ತರಬೇಕಾಗಿರು ಸ್ಥಿತಿ ಇದೆ. ಈ ಗ್ರಾಮದಲ್ಲಿ ಸುಮಾರು 200ಕ್ಕಿಂತ ಹೆಚ್ಚು ಜನರು ವಾಸಿಸುತ್ತಾರೆ ಹಾಗೂ ಸುತ್ತಮುತ್ತ ಕೆಲವು ಸಣ್ಣಪುಟ್ಟ ಹಳ್ಳಿಗಳು ಕೂಡ ಸೇರುತ್ತವೆ. ನೀರಿನ ಟ್ಯಾಂಕ್ ನಿರ್ಮಿಸಿ, ಮನೆ ಮನೆಗೂ ನೀರು ಹರಿಸಲಾಗುತ್ತದೆ ಎಂದು ಹೇಳಿ ಹೋದವರು, ಇಲ್ಲಿಯವರೆಗೂ ಇತ್ತ ತಿರುಗಿ ನೋಡಿಲ್ಲ. ಕುಡಿಯೋಕೆ ಒಂದು ಹನಿ ನೀರು ಕೂಡ ಬಂದಿಲ್ಲ. ಅಧಿಕಾರಿಗಳಿಗೆ ಹೇಳಿದರೆ ಮೇಲಧಿಕಾರಿಗಳಿಗೆ ಜೊತೆ ಚರ್ಚಿಸುತ್ತೇವೆ ಎಂದು ಆಶ್ವಾಸನೆ ಮಾತ್ರ ಕೊಡುತ್ತಿದ್ದಾರೆ.
ಈ ಬಗ್ಗೆ ಗ್ರಾಮದ ನಿವಾಸಿ ದೊಡ್ಡ ನಾಗಮ್ಮ ಅವರನ್ನು ಮಾತನಾಡಿಸಲಾಗಿ, “ಮೂರು ವರ್ಷಗಳ ಹಿಂದೆ ಅಲ್ಪ ಸ್ವಲ್ಪ ನೀರು ಬರುತ್ತಿತ್ತು. ಗ್ರಾಮಕ್ಕೆ ದಿನದ ಇಪ್ಪತ್ನಾಲ್ಕು ಗಂಟೆಯೂ ನೀರು ಬಿಡಲಾಗುವುದು ಎಂದು ಸುಸಜ್ಜಿತ ನೀರಿನ ಟ್ಯಾಂಕ್ ನಿರ್ಮಿಸಿದರು. ಮನೆ ಮನೆಗೂ ನೀರು ಬರೀ ಹೆಸರಿಗೆ ಮಾತ್ರವಾಗಿದೆ. ಕುಡಿಯಲು ತಂಬಿಗೆ ನೀರು ತರಲು ಉರಿಬಿಸಿಲಿನಲ್ಲಿ ಮೂರ್ನಾಲ್ಕು ಮೈಲಿ ನಡೆದು ಹೋಗಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಇನ್ನು ಅಧಿಕಾರಿಗಳು ಕುಡಿಯಲು ನೀರಿಲ್ಲ ಎಂದರೆ, ಅಸಡ್ಡೆ ಮಾತಾಡಿ ಸುಮ್ಮನಾಗುತ್ತಾರೆ. ಅಧಿಕಾರಿಗಳು, ಜನ ಪ್ರತಿನಿಧಿಗಳೇ ಹೀಗೆ ಅಭಿವೃದ್ಧಿಗೆ ಬೆನ್ನು ತೋರಿಸಿ ಹೊರಟರೆ ನಮ್ಮಗಳ ಗೋಳು ಕೇಳುವವರಾರು. ಕುಡಿಯುವ ನೀರು ಕೊಡುವವರು ಯಾರು? ನಮ್ಮ ಬವಣೆ ತಪ್ಪಿಸುವವರು ಯಾರು?” ಎಂದು ಅಳಲು ತೋಡಿಕೊಂಡರು.
ಗ್ರಾಮದ ನಿವಾಸಿ ದುರುಗಪ್ಪ ಈದಿನ ಡಾಟ್ ಕಾಂ ಜೊತೆ ಮಾತನಾಡಿ, “ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಸುಸಜ್ಜಿತ ನೀರಿನ ಟ್ಯಾಂಕ್ ಇದ್ದರೂ ಕುಡಿಯಲು ನೀರಿಲ್ಲ. ದುಡಿಯುವುದನ್ನು ಬಿಟ್ಟು ಬರೀ ನೀರಿಗಾಗಿ ಹೋರಾಡಬೇಕಾಗಿದೆ. ಇಡೀ ದಿನ ನೀರು ಇದ್ದ ಕಡೆ ಹೋಗುವುದು ಸಾಲು ನಿಂತು ನೀರು ತುಂಬಿಸುವುದೇ ನಮ್ಮ ಕಾಯಕವಾಗಿದೆ. ಜಾನುವಾರುಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲ. ಊರಿಂದ ಹೊರ ನಡೆದು ನೀರು ತಂದರೆ ಮಾತ್ರ ಜಾನುವಾರುಗಳಿಗೆ ನೀರು. ಗ್ರಾಮಕ್ಕೆ ಮೇಲಧಿಕಾರಿಗಳು ಭೇಟಿ ನೀಡಿ ಕುಡಿಯಲು ವ್ಯವಸ್ಥೆ ಕಲ್ಪಿಸಬೇಕು” ಎಂದು ಮನವಿ ಮಾಡಿದರು.

ಉಸ್ಮಾನ್ ಸಾಬ್ ಮಾತನಾಡಿ, “ಪಂಚಾಯತ್ ಅಧಿಕಾರಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳುವುದು ಮತ್ತೆ ಇದೆ ಗೋಳು ಯಥಾರೀತಿ ಮುಂದುವರೆಸುವುದು. ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಟ್ಯಾಂಕ್ ನಿರ್ಮಿಸಿದ್ದರೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಮೂರು ವರ್ಷಗಳಿಂದ ನೀರು ಸ್ಥಗಿತವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಚುನಾವಣೆ ಸಮಯದಲ್ಲಿ ಮಾತ್ರ ಪ್ರತಿನಿಧಿಗಳು ಬರುವುದು. ಅವರ ಭರವಸೆಗಳು ಕೇವಲ ಒಣ ಭಾಷಣಗಳಿಗಷ್ಟೇ ಸೀಮಿತವಾಗಿವೆ. ಗೆದ್ದ ಬಳಿಕ ಒಮ್ಮೆಯೂ ಗ್ರಾಮಕ್ಕೆ ಹಿಂತಿರುಗಿಲಿಲ್ಲ. ಸಾವಿರಾರು ಕೋಟಿ ಹಣ ಖರ್ಚು ಮಾಡಿ ಮನೆ ಮನೆಗೂ ನಲ್ಲಿ ಹಾಕಿಸಿರುವುದು ಹೆಸರಿಗೆ ಮಾತ್ರ” ಎಂದರು.
ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ ನೀರಿನ ಟ್ಯಾಂಕ್ ಮುಖಾಂತರ ಗ್ರಾಮಕ್ಕೆ ನೀರು ತಲುಪಿಸಲಾಗುವುದು ಹಾಗೂ ಮೇಲಧಿಕಾರಿಗಳ ಜೊತೆ ಚರ್ಚೆ ಮಾಡಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದರು.
ಇದನ್ನೂ ಓದಿ: ರಾಯಚೂರು | ಪೊಲೀಸರ ಕಿರುಕುಳ ತಪ್ಪಿಸುವಂತೆ ಡಿವೈಎಸ್‌ಪಿಗೆ ಮನವಿ
ಈಗಲಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವರೇ ಕಾದು ನೋಡಬೇಕಿದೆ.


ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್