ಲಾರಿ ಮತ್ತು ಸರಕು ಸಾಗಿರುವ ಟಾಟಾ ಏಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಪಗಡದಿನ್ನಿ ಕ್ಯಾಂಪ್ ಬಳಿ ಗುರುವಾರ ಮುಂಜಾನೆ ಘಟನೆ ನಡೆಸಿದೆ. ನಾಲ್ವರು ಮೃತಪಟ್ಟಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿವೆ.
ಮೃತರನ್ನು ಸಿಂಧನೂರಿನ ಸಾಯಿ ಸಂಗಮ ಸಪ್ಲುಯರ್ಸ್ ಕಾರ್ಮಿಕ ಇಸ್ಮಾಯಿಲ್ ರಷೀದ್ (25), ರವಿ ರಾಜಪ್ಪ (20), ರಮೇಶ ನಿಂಗಪ್ಪ ಕಣೇಕಲ್ಲೂರು (28), ಅಂಬರೀಶ್ ಸೂಗಪ್ಪ ಕಣೇಕಲ್ಲೂರು (28) ಎಂದು ಗುರುತಿಸಲಾಗಿದೆ.
ಐವರು ಟಾಟಾ ಏಸ್‌ನಲ್ಲಿ ಮುದ್ದಾಪುರಕ್ಕೆ ತೆರಳುತ್ತಿದ್ದರು. ಈ ವೇಳೆ, ಎದುರಿನಿಂದ ಬಮದ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ಟಾಟಾ ಏಸ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಮೀರ್ ಮನೋಜ್ ಬಂಗಾಲಿ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಮೃಹದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.