ಕೃಷ್ಣ ನದಿಯಲ್ಲಿ ಕುರಿಗಳಿಗೆ ನೀರು ಕುಡಿಸಲು ಹೋಗಿದ್ದ ವೇಳೆ ಬಾಲಕನ ಮೇಲೆ ದೊಡ್ಡ ಗಾತ್ರದ ಮೊಸಳೆ ದಾಳಿ ನಡೆಸಿ ಎಳೆದೊಯ್ದ ಘಟನೆ ರಾಯಚೂರು ತಾಲೂಕಿನ ಗಂಜಳ್ಳಿ ಗ್ರಾಮದಲ್ಲಿ ನಡೆದಿದೆ.
ಗಂಜಳ್ಳಿ ಗ್ರಾಮದ ವಿಶ್ವ(12) ಮೃತಪಟ್ಟಿರುವ ಬಾಲಕ ಎಂದು ತಿಳಿದುಬಂದಿದೆ. ಎಂದಿನಂತೆ ಕುರಿಕಾಯಲು ಹೋಗಿದ್ದ ಬಾಲಕ ವಿಶ್ವ, ಶುಕ್ರವಾರ ಮಧ್ಯಾಹ್ನ ಕುರಿಗಳಿಗೆ ನೀರು ಕುಡಿಸಲು ಹೋಗಿದ್ದ ಸಂದರ್ಭದಲ್ಲಿ ಮೊಸಳೆ ಬಾಲಕನ ಮೇಲೆ ದಾಳಿ ನಡೆಸಿ ಎಳೆದೊಯ್ದಿದೆ.
ಈ ಘಟನೆ ಕುರಿತು ಪೋಷಕರು ಗ್ರಾಮೀಣ ಠಾಣೆಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಗ್ರಾಮೀಣ ಠಾಣೆ ಪೋಲಿಸರು, ಆಗ್ನಿಶಾಮಕ ದಳ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆದ್ದಾರೆ. ನಿನ್ನೆ ಮಧ್ಯಾಹ್ನದಿಂದ ಶೋಧ ಕಾರ್ಯ ಆರಂಭಿಸಿದ್ದು, ಈವರೆಗೂ ಮುಂದಿವರೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಗಳ ಜೊತೆಗೆ ಪೊಲೀಸರು ಮತ್ತು ಗ್ರಾಮಸ್ಥರು ಸಾಥ್ ನೀಡಿ ನದಿಗೆ ಬೋಟಿನಲ್ಲಿ ತೆರಳಿ ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ದೊಡ್ಡ ಗಾತ್ರದ ಮೊಸಳೆಯಾಗಿದ್ದರಿಂದ ಅರವಳಿಕೆ ಮದ್ದು ನೀಡಿ ಸೆರೆಹಿಡಿಯಬೇಕಾಗಿದೆ. ರಾತ್ರಿವರೆಗೂ ಶೋಧ ನಡೆಸಿದ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಗಳು ಪ್ರಯತ್ನಿಸಿದ್ದು ಮೊಸಳೆ ಪ್ರತ್ಯಕ್ಷವಾಗಿಲ್ಲ. ಶನಿವಾರ ಕೂಡಾ ಸ್ಥಳಕ್ಕೆ ತೆರಳಿ ಶೋಧ ಕಾರ್ಯ ನಡೆಸಿದ್ದಾರೆ. ಮೊಸಳೆ ಸೆರೆಹಿಡಿಯಲು ಅಧಿಕಾರಿಗಳು, ಸಿಬ್ಬಂದಿಗಳು ಕಸರತ್ತು ನಡೆಸಿದ್ದು, ಜತೆಗೆ ಗ್ರಾಮಸ್ಥರೂ ಕೂಡಾ ಹುಡುಕಾಟ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಬಂಡವಾಳಶಾಹಿಗಳಿಂದ ಭೂಮಿ ಉಳಿಸಬೇಕಿದೆ: ರಾಕೇಶ್ ಟಿಕಾಯತ್
ಇತ್ತ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಾಲಕನಿಗಾಗಿ ಪರಿತಪಿಸುತ್ತಿದ್ದಾರೆ.
ವರದಿ : ಹಫೀಜುಲ್ಲ
