ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ(ಪಿಎಸ್-ಜೆಎಸಿ) ಸದಸ್ಯರು ರಾಯಚೂರು ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಆರು ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳಿಗೆ ವಿಸ್ತರಿಸಲು ತೀರ್ಮಾನ ಕೈಗೊಂಡಿದ್ದಾರೆ.
ಪ್ರಗತಿಪರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ(ಪಿಎಸ್-ಜೆಎಸಿ) ನೇತೃತ್ವದಲ್ಲಿ ಮಹಿಳೆಯರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೀಶ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಪಾಂಡ್ವೆ ಭೇಟಿ ನೀಡಿ, ಪ್ರತಿಭಟನೆ ಹಿಂಪಡೆಯುವಂತೆ ಕೋರಿದರು.
“ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರದ ಗಮನಕ್ಕೆ ತರಲಾಗಿದೆ. ಶುದ್ಧ ನೀರಿನ ಘಟಕದ ದುರಸ್ತಿಗೆ ಕಾರ್ಯಾರಂಭಿಸಲಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು ಹಾಗೂ ಅಪೌಷ್ಟಿಕತೆ ತಡೆಗಟ್ಟಲು ಮಾರ್ಚ್ ತಿಂಗಳೊಳಗೆ ಕಾರ್ಯ ರೂಪಕ್ಕೆ ತರಲು ಪ್ರಯತ್ನ ನಡೆದಿದೆ” ಎಂದು ಅಧಿಕಾರಿಗಳು ಪ್ರತಿಭಟನಾಕಾರರಿಗೆ ತಿಳಿಸಿದರು.

“ದೇವದಾಸಿ ಪದ್ಧತಿ ಮರುಸಮೀಕ್ಷೆ ನಡೆಸಲು ಈಗಾಗಲೇ ತರಬೇತಿ ನಡೆಯುತ್ತಿದೆ. ಮಹಿಳೆಯರು ಹೋರಾಟ ನಿಲ್ಲಿಸಿ ಮನೆಗಳಿಗೆ ತೆರಳಬೇಕು” ಎಂದು ಮನವಿ ಮಾಡಿದರು.
“ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಕಲ್ಯಾಣ ಕರ್ನಾಟಕದಲ್ಲಿ ಮಹಿಳೆಯರು ರಕ್ತಹೀನತೆ, ಅಪೌಷ್ಟಿಕತೆಯಿಂದ ಬಳಲುತ್ತಿದ್ದೇವೆ. ಅನಕ್ಷರತೆ ಪ್ರಮಾಣ ಕಡಿಮೆಯಾಗಿಲ್ಲ. ದೇಶದ ಹಿಂದುಳಿದ ರಾಜ್ಯಗಳ ಪಟ್ಟಿಯಲ್ಲಿ ಈ ಭಾಗದ ಜಿಲ್ಲೆಗಳೂ ಸೇರಿವೆ. ರಾಜ್ಯ ಸರ್ಕಾರ ಕನಿಷ್ಠ ಪ್ರತಿ ವರ್ಷ ₹3000 ಕೋಟಿ ಬಜೆಟ್ ಕೊಟ್ಟು 30 ಲಕ್ಷ ಜೀವಗಳನ್ನು ಉಳಿಸಬೇಕು” ಎಂದು ಒತ್ತಾಯಿಸಿದರು.
ಆರು ದಿನಗಳ ಅವಧಿಯಲ್ಲಿ ಸರ್ಕಾರದಿಂದ ಯಾವುದೇ ರೀತಿಯ ನಿರ್ದಿಷ್ಟ ಉತ್ತರ ಬಂದಿಲ್ಲ. ಹೀಗಾಗಿ ತೀವ್ರರೂಪದ ಹೋರಾಟ ನಡೆಸಲು ತೀರ್ಮಾನ ಕೈಗೊಂಡು ತಾತ್ಕಾಲಿಕವಾಗಿ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ: ಕರುನಾಡ ವಿಜಯಸೇನೆ ಪ್ರತಿಭಟನೆ
“ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಕಲ್ಯಾಣ ಕರ್ನಾಟಕ ಜಿಲ್ಲೆಗಳಿಂದ ಮಹಿಳೆಯರಲ್ಲಿ ರಕ್ತಹೀನತೆ ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು ರಾಜ್ಯ ಸರ್ಕಾರ ಯೋಜನಾ ಬದ್ಧವಾದ ಯೋಜನೆಯ ರೂಪಿಸಬೇಕು” ಎಂದು ಆಗ್ರಹಿಸಿದ್ದರು.
“ದೊಡ್ಡದಾದ ಶಿಕ್ಷಣ ಇಲಾಖೆಯಲ್ಲಿ ಕೇವಲ 20 ಸಾವಿರ ಮಂದಿ ಶಿಕ್ಷಕರನ್ನು ಇಟ್ಟುಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಯದಿರುವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿದೆ” ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.
ಮೋಕ್ಷಮ್ಮ, ವಿದ್ಯಾ ಪಾಟೀಲ, ವಿರೂಪಮ್ಮ, ಬಸವರಾಜ್, ಗುರುರಾಜ್ ನೇತೃತ್ವದಲ್ಲಿ ನೂರಾರು ಮಂದಿ ಪ್ರತಿಭಟನಾಕಾರರು ಇದ್ದರು.