ಇಡೀ ರಾಜ್ಯದಲ್ಲಿ ಬಿಸಿಲಿನ ವಾತಾವರಣವಿದ್ದು, ಉತ್ತರ ಕರ್ನಾಟಕವಂತೂ ಕಾದ ಹಂಚಾಗಿದೆ. ರಾಯಚೂರಿನಲ್ಲಿ ಬಿಸಿಲ ಝಳ ತಾಳಲಾರದೇ ವೃದ್ದರೊಬ್ಬರು ಭಾನುವಾರ ಮೃತ ಬಿಟ್ಟಿದ್ದಾರೆ. ವಾರದ ಹಿಂದೆಯಷ್ಟೇ ರಾಯಚೂರು ಜಿಲ್ಲೆಯಲ್ಲಿಯೇ ವ್ಯಕ್ತಿಯೊಬ್ಬರು ಬಿಸಿಲಿನಿಂದ ಮೃತಪಟ್ಟಿದ್ದರು.
ತಿಂಗಳ ಅಂತರದೊಳಗೆ ರಾಯಚೂರು ಜಿಲ್ಲೆಯಲ್ಲಿ ಬಿಸಿಲಿಗೆ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ರಾಯಚೂರು ನಗರದ ನಿವಾಸಿ ರಾಮಣ್ಣ ಕಬ್ಬೇರ್ ಎಂಬುವವರು ಭಾನುವಾರ ಬಿಸಿಲಿನಿಂದ ಬಳಲಿ ಮೃತಪಟ್ಟಿದ್ದು, ಅವರಿಗೆ 70 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ರಾಯಚೂರಿನ ಗೋಶಾಲಾ ರಸ್ತೆಯಲ್ಲಿರುವ ಯಕ್ಲಾಸಪುರ ಬಡಾವಣೆ ನಿವಾಸಿಯಾದ ರಾಮಣ್ಣ ಅವರು ಭಾನುವಾರ ಬೆಳಿಗ್ಗೆ ಬಿಸಿಲಿನಲ್ಲಿ ನಡೆದು ಹೊರಟಿದ್ದರು. ನಿಶ್ಯಕ್ತಿಗೆ ಒಳಗಾಗಿ ತಲೆ ಸುತ್ತಿನಿಂದ ಏಕಾಏಕಿ ರಸ್ತೆ ಬದಿಯಲ್ಲಿ ಮಲಗಿದ್ದರು. ಕುಸಿದು ಬಿದ್ದವರು ಅಲ್ಲಿಯೇ ಮೃತಪಟ್ಟಿದ್ದಾರೆ. ಕೂಡಲೇ ಕುಟುಂಬದವರು ಆಗಮಿಸಿದರೂ, ಅಷ್ಟರಲ್ಲಾಗಲೇ ರಾಮಣ್ಣ ಮೃತಪಟ್ಟಿದ್ದರು.
ಮಹಜರು ಕಾರ್ಯ ನಡೆಸಿದ ರಾಯಚೂರು ನಗರ ಪೊಲೀಸರು, ನಂತರ ಕುಟುಂಬದವರಿಗೆ ರಾಮಣ್ಣ ದೇಹವನ್ನು ಹಸ್ತಾಂತರಿಸಿದ್ದಾರೆ. ರಾಯಚೂರು ನಗರದಲ್ಲಿ ಒಂದೂವರೆ ತಿಂಗಳಿನಿಂದ ಬಿಸಿಲಿನ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಇದೆ. ಕೆಲದಿನಗಳಿಂದ ಬಿಸಿಲು ಇನ್ನೂ ಹೆಚ್ಚಿದ್ದು, ಬಿಸಿ ಗಾಳಿಯೂ ಬೀಸುತ್ತಿದೆ. ಇದರಿಂದ ಜನ ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ.
ಬೆಳಗ್ಗೆ 11ರ ನಂತರ ಹೊರಗೆ ಬರಬೇಡಿ ಎಂದು ಜನರಿಗೆ ತಿಳವಳಿಕೆ ನೀಡಲಾಗುತ್ತಿದೆ. ಆದರೂ, ಸಣ್ಣಪುಟ್ಟ ಕೆಲಸದ ಕಾರಣಕ್ಕೆ ಹೊರಗೆ ಬರುವವರ ಸಂಖ್ಯೆ ಹೆಚ್ಚಿದೆ. ವಯಸ್ಸಾದವರು ಹೊರ ಬಂದು ಸಂಕಷ್ಟಕ್ಕೆ ಸಿಲುಕುವುದು ಹೆಚ್ಚಿದೆ.
ಕಳೆದವಾರ ಲಿಂಗಸುಗೂರಿನ ಬಸ್ ನಿಲ್ದಾಣದ ಆವರಣದಲ್ಲಿ ವ್ಯಕ್ತಿಯೊಬ್ಬ ಬಿಸಿಲಿನಿಂದ ಮೃತಪಟ್ಟ ಘಟನೆ ನಡೆದಿತ್ತು. ಮಸ್ಕಿ ತಾಲೂಕಿನ ಆನಂದಗಲ್ಲ ಗ್ರಾಮದ ಕೃಷ್ಣಪ್ಪ ಬಳ್ಳಾರೆಪ್ಪ ಎಂಬಾತ ಬಿಸಿಲಿನಿಂದ ಬಳಲಿ ನಿಲ್ದಾಣದಲ್ಲಿ ಕುಳಿತಲ್ಲೇ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ, ರಾಯಚೂರು, ಬಾಗಲಕೋಟೆ, ಬೀದರ್, ವಿಜಯಪುರ, ಬಳ್ಳಾರಿ, ಗದಗ, ಕೊಪ್ಪಳ ಸಹಿತ ಹಲವು ಜಿಲ್ಲೆಗಳಲ್ಲಿ ಬಿಸಿಲಿನಿಂದ ಬಳಲಿ ನಿರ್ಜಲೀಕರಣಕ್ಕೆ ಅಸ್ವಸ್ಥರಾಗುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇನ್ನೂ ಮೂರರಿಂದ-ನಾಲ್ಕು ದಿನಗಳ ಕಾಲ ಬಿಸಿ ಗಾಳಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಲಿದೆ ಎಂದು, ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಕೇಂದ್ರ ಮುನ್ಸೂಚನೆ ನೀಡಿದೆ.
