ಬೇಸಿಗೆ ಕಾಲದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ತಾಪಮಾನ ಹೆಚ್ಚಳದಿಂದ ಜನರು ಒಂದೆಡೆ ಪರಿತಪಿಸುತ್ತಿದ್ದರೇ, ಇನ್ನೊಂದೆಡೆ ಜಾನವಾರುಗಳು ಬಿಸಿಲಿನ ಬೇಗೆಯಿಂದ ಬಳಲುವಂತಾಗಿದೆ. ಬೇಸಿಗೆಯು ಜಾನುವಾರಗಳಲ್ಲಿ ಶಾಖದ ಒತ್ತಡಕ್ಕೆ ಕಾರಣವಾಗಿದೆ. ತೀವ್ರ ಬಿಸಿಲು ಎಮ್ಮೆಗಳು, ಹಸುಗಳು ಹಾಗೂ ಮಿಶ್ರತಳಿಗಳ ಹಾಲಿನ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ.
ಅಧಿಕ ತಾಪಮಾನದಿಂದಾಗಿ ತಮಿಳುನಾಡಿನಲ್ಲಿ ಎಮ್ಮೆಗಳು, ಹಸುಗಳು ಹಾಗೂ ಮಿಶ್ರತಳಿ ರಾಸುಗಳ ಹಾಲಿನ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಆವಿನ್ ತಮಿಳುನಾಡು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ ಸಂಗ್ರಹಿಸುವ ಹಾಲಿನ ಪ್ರಮಾಣದಲ್ಲಿ ಕಳೆದ 10 ದಿನಗಳಿಂದ ನಿತ್ಯ ಐದು ಲಕ್ಷ ಲೀಟರ್‌ಗಳಷ್ಟು ಕುಸಿದಿದೆ. ಮಾರ್ಚ್‌ನಲ್ಲಿ ದಿನಕ್ಕೆ 30 ಲಕ್ಷದಿಂದ 31 ಲಕ್ಷ ಲೀಟರ್‌ಗಳ ನಡುವೆ ಇದ್ದ ಸರಾಸರಿ ಸಂಗ್ರಹವು ಏಪ್ರಿಲ್ 1 ರಿಂದ 25 ಲಕ್ಷ ಲೀಟರ್‌ಗೆ ಕುಸಿದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ದಿನಕ್ಕೆ 26 ಲಕ್ಷ ಲೀಟರ್ ಸಂಗ್ರಹವಾಗುತ್ತಿತ್ತು. ಅಗ, ದಿನಕ್ಕೆ ಕೇವಲ ಒಂದು ಲಕ್ಷ ಲೀಟರ್ ಕುಸಿತವಾಗಿತ್ತು ಎಂದು ಆವಿನ್ ಹೇಳಿಕೊಂಡಿದೆ.
ಈ ವರ್ಷ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಐಸ್, ಕೆನೆ ಹಾಗೂ ಹಾಲಿನ ಸಿಹಿತಿಂಡಿಗಳಂತಹ ಮಿಶ್ರ ಉತ್ಪನ್ನಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು. ಇದು ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂದು ಮೂಲಗಳು ತಿಳಿಸಿವೆ.
ಆವಿನ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್ ವಿನೀತ್ ಮಾತನಾಡಿ, “ಶಾಖದ ಅಲೆಯಿಂದಾಗಿ ಜಾನುವಾರುಗಳ ಹಾಲು ಇಳುವರಿ ಸಾಮರ್ಥ್ಯ ಕಡಿಮೆಯಾಗಿದೆ. ಧರ್ಮಪುರಿ ಮತ್ತು ತಿರುಚ್ಚಿ ಜಿಲ್ಲೆಗಳಲ್ಲಿ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಇದರ ಪರಿಣಾಮ ಹಾಲು ಸಂಗ್ರಹಣೆಯಲ್ಲಿ ಕನಿಷ್ಠ ಕುಸಿತವಾಗಿದೆ. ಆದರೆ, ನಮ್ಮ ಕಾರ್ಡ್‌ದಾರರು ಮತ್ತು ಚಿಲ್ಲರೆ ಗ್ರಾಹಕರಿಗೆ ಹಾಲು ಪೂರೈಕೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ” ಎಂದು ಅವರು ಹೇಳಿದರು.
“ನಾವು ಈಗಾಗಲೇ ಸಮಸ್ಯೆಯನ್ನು ಸರಿಪಡಿಸಲು ಸಿದ್ಧತೆಗಳನ್ನು ಮಾಡಿದ್ದೇವೆ. ನಮ್ಮಲ್ಲಿ ಸಾಕಷ್ಟು ಹಾಲಿನ ಪುಡಿ ದಾಸ್ತಾನು ಇದೆ. ಕೊಬ್ಬಿನ ಅಂಶವನ್ನು ಹೆಚ್ಚಿಸಲು ಹಾಲಿನ ಪುನರ್‌ನಿರ್ಮಾಣಕ್ಕಾಗಿ ಆವಿನ್ ತುಪ್ಪವನ್ನು ಸಹ ಸಂಗ್ರಹಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಆವಿನ್ ಮತ್ತು ಖಾಸಗಿ ಡೈರಿಗಳು ಸೇರಿದಂತೆ ಮಾರಾಟಗಾರರು ಹಾಲಿನ ಉತ್ಪಾದನೆಗೆ ಜರ್ಸಿ ಮತ್ತು ಹೋಲ್‌ಸ್ಟೈನ್ ಫ್ರೈಸಿಯನ್ ಹಸುಗಳು ಹಾಗೂ ಕ್ರಾಸ್‌ಬೀಡ್ ಎಮ್ಮೆಗಳಂತಹ ತಳಿಗಳನ್ನು ಹೆಚ್ಚು ಅವಲಂಬಿಸಿದ್ದಾರೆ. ಹೆಚ್ಚುವರಿಯಾಗಿ, ಜರ್ಸಿ ಮತ್ತು ಎಚ್‌ಎಫ್ ಮಿಶ್ರತಳಿಗಳಿಂದ ಹೆಚ್ಚು ಹಾಲನ್ನು ಪಡೆಯಲಾಗುತ್ತದೆ. ಸ್ಥಳೀಯ ತಳಿಗಳಿಂದ ಉತ್ಪತ್ತಿಯಾಗುವ ಹಾಲನ್ನು ಹೆಚ್ಚಾಗಿ ಜಾನುವಾರು ಸಾಕಣೆದಾರರು ಸೇವಿಸುತ್ತಾರೆ. ಕಡಿಮೆ ಕೊಬ್ಬಿನ ಅಂಶದಿಂದಾಗಿ ವಾಣಿಜ್ಯ ಉದ್ದೇಶಕ್ಕೆ ಆ ಹಾಲನ್ನು ಪೂರೈಕೆ ಮಾಡುವುದಿಲ್ಲ.
ಆವಿನ್‌ನಲ್ಲಿರುವ ಪಶುವೈದ್ಯರೊಬ್ಬರು ಮಾತನಾಡಿ, “ಸ್ಥಳೀಯ ತಳಿಗಳಿಗೆ ಹೋಲಿಸಿದರೆ, ಮಿಶ್ರತಳಿ ಹಸುಗಳಿಗೆ ಕಡಿಮೆ ಉಷ್ಣಾಂಶವಿರಬೇಕು. ಅವುಗಳು ಹೆಚ್ಚು ಉಷ್ಣಾವನ್ನು ಸಹಿಸುವುದಿಲ್ಲ. ಶಾಖದ ಒತ್ತಡದಿಂದಾಗಿ, ಹಾಲು ನೀಡುವ ಹಸುಗಳ ಆಹಾರ ಸೇವನೆಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇದು ಅವುಗಳ ಹಾಲು ಇಳುವರಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ವೈಮಾನಿಕ ಕೇಂದ್ರವಾಗಿ ಬೆಂಗಳೂರು ಅಭಿವೃದ್ಧಿ; ಏರ್ ಇಂಡಿಯಾ-ಬಿಐಎಎಲ್ ಒಪ್ಪಂದ
ಖಾಸಗಿ ಡೈರಿಗಳಿಂದ ಉತ್ಪಾದನೆ ಕುಸಿತ
ವಿದೇಶಿ ಹಸುವಿನ ತಳಿಗಳಿಗಿಂತ ಎಮ್ಮೆಗಳು ಕಡಿಮೆ ಬೆವರು ಗ್ರಂಥಿಗಳಿಂದ ಶಾಖದ ಒತ್ತಡಕ್ಕೆ ಹೆಚ್ಚು ಒಳಗಾಗುವುದರಿಂದ ಪಾಲ್ಕೋವಾ ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ ಹಾಲಿನ ಉತ್ಪನ್ನಗಳ ಉತ್ಪಾದನೆಯಲ್ಲಿ ಬಳಸಲಾಗುವ ಎಮ್ಮೆ ಹಾಲು ಸಹ ಪರಿಣಾಮ ಬೀರುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ತಮಿಳುನಾಡು ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ಎಂ ಜಿ ರಾಜೇಂದ್ರನ್ ಮಾತನಾಡಿ, ”ರಾಜ್ಯದಾದ್ಯಂತ ಖಾಸಗಿ ಡೈರಿಗಳ ಹಾಲಿನ ಉತ್ಪಾದನೆಯೂ ಸ್ವಲ್ಪಮಟ್ಟಿಗೆ ಕುಸಿದಿದೆ. ಮೂರು ದಶಕಗಳ ಹಿಂದೆ, ಹೈನುಗಾರರು ಆವಿನ್ ಮತ್ತು ಪಶುಸಂಗೋಪನೆ ಇಲಾಖೆಯಿಂದ ವರ್ಷವಿಡೀ ಪಶುವೈದ್ಯಕೀಯ ನೆರವು ಪಡೆಯುತ್ತಿದ್ದರು. ಆದರೆ ಈಗ ಈ ಹುದ್ದೆಗಳನ್ನು (ಪಶುವೈದ್ಯರು) ಹೊರಗುತ್ತಿಗೆ ನೀಡಲಾಗಿದೆ” ಎಂದಿದ್ದಾರೆ.
ಪಶುಸಂಗೋಪನಾ ಚಿಕಿತ್ಸಾಲಯಗಳು ಸಾಕಷ್ಟು ಸಂಖ್ಯೆಯ ಪಶುವೈದ್ಯರನ್ನು ಹೊಂದಿಲ್ಲ. ಇದರಿಂದಾಗಿ ರೈತರು ಪ್ರಾಣಿಗಳ ಚಿಕಿತ್ಸೆಗಾಗಿ ಹೆಚ್ಚುವರಿ ವೆಚ್ಚವನ್ನು ಮಾಡುವಂತಾಗಿದೆ.