ರಾಯಚೂರು ಜಿಲ್ಲೆಯ ಲಿಂಗಸುಗೂರುನಲ್ಲಿರುವ ಇಳಕಲ್ಲ ವಿಜಯ ಮಹಾಂತೇಶ್ವರ ಮಠಕ್ಕೆ ಭಕ್ತರ ವೇಷದಲ್ಲಿ ಬಂದಿದ್ದ ಕಳ್ಳರಿಬ್ಬರು, ಬರೋಬ್ಬರಿ ₹40 ಲಕ್ಷ ಮೌಲ್ಯದ ಸೊತ್ತನ್ನು ದರೋಡೆಗೈದ ಘಟನೆ ಗುರುವಾರ ತಡರಾತ್ರಿ ನಡೆದಿರುವುದಾಗಿ ವರದಿಯಾಗಿದೆ.
ಗುರುವಾರ ಮಧ್ಯರಾತ್ರಿ 12ರಿಂದ 12.30ರ ನಡುವೆ ಮಠಕ್ಕೆ ಬಂದಿದ್ದ ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಪಿಸ್ತೂಲ್ ಹಿಡಿದು ಜೀವ ಬೆದರಿಕೆ ಹಾಕುವ ಮೂಲಕ ಕಪಾಟು ಹಾಗೂ ಟ್ರಂಕುಗಳಲ್ಲಿದ್ದ 7 ತೊಲ ಚಿನ್ನ, 10 ಕೆ.ಜಿ ಬೆಳ್ಳಿ, ಅಂದಾಜು ₹20 ಲಕ್ಷ ನಗದು ದೋಚಿಕೊಂಡು ಹೋಗಿರುವುದಾಗಿ ಮಠದ ಉಸ್ತುವಾರಿಗಳು ಲಿಂಗಸುಗೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪಾದ ಮತ್ತು ಇಷ್ಟಲಿಂಗ ಪೂಜೆಗೆ ಬಳಸುವ ಬೆಳ್ಳಿ ಸಾಮಗ್ರಿಗಳು, ಚಿನ್ನದ ಕರಡಿಗೆ ಮತ್ತು ಸುತ್ತುಂಗುರಗಳನ್ನು ಲೂಟಿ ಮಾಡಿಕೊಂಡು ಹೋಗಿದ್ದಾರೆ ಎಂದು ಶಾಖಾ ಮಠದ ಸಿದ್ದಲಿಂಗ ಸ್ವಾಮೀಜಿ, ಲಿಂಗಸುಗೂರು ಪೊಲೀಸರಿಗೆ ದೂರು ನೀಡಿದ್ದಾರೆ.
“ಮಠದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಕಳ್ಳರ ಕೃತ್ಯ ಸೆರೆಯಾಗಿದೆ. ಗುರುವಾರ ಮಧ್ಯರಾತ್ರಿ 12ರಿಂದ 12.30ರ ನಡುವೆ ಈ ದರೋಡೆ ನಡೆದಿದೆ” ಎಂದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಲಿಂಗಸುಗೂರು ಪೊಲೀಸರು ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಇನ್‌ಸ್ಪೆಕ್ಟರ್ ಪುಂಡಲೀಕ್ ಪಟಾತರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ ಹರೀಶ್, ಆರ್ ಶಿವಕುಮಾರ್, ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.
ಇದನ್ನು ಓದಿದ್ದೀರಾ? 21 ಐಎಎಸ್ ಅಧಿಕಾರಿಗಳ ವರ್ಗಾವಣೆ
ಸ್ಥಳ ಮಹಜರಿನ ವೇಳೆ ಲಿಂಗಸುಗೂರು ಠಾಣೆಯ ಪಿಎಸ್‌ಐ ಹನಮಂತಪ್ಪ, ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ಶರಣ ಬಸಪ್ಪ, ಸೋಮಪ್ಪ, ಸಿದ್ದಪ್ಪ, ಭೀಮಣ್ಣ ಉಪಸ್ಥಿತರಿದ್ದರು.