ಶುದ್ಧ ಕುಡಿಯುವ ನೀರಿನ ಘಟಕ 2017ರಲ್ಲೇ ಸ್ಥಾಪನೆ ಮಾಡಿದ್ದರೂ ಈವರಗೆ ಕಾರ್ಯಾಚರಣೆ ಆರಂಭವಾಗದಿರುವುದು ದುರಂತವೇ ಸರಿ. ಈ ನಡೆ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಜನಪ್ರತಿನಿಧಿಗಳ ಆಸಕ್ತಿಗೆ ಹಿಡಿದ ಕನ್ನಡಿಯಾಗಿದೆ. ಕಲುಷಿತ ನೀರಿನಿಂದ ಅಸ್ವಸ್ಥರಾಗುತ್ತಿರುವ ವರದಿಗಳು ಬಂದರೂ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಸರ್ಕಾರ ಗಮನ ಹರಿಸದಿರುವುದು ಶೋಚನೀಯವಾಗಿದೆ.
ರಾಯಚೂರು ಜಿಲ್ಲೆ ಮಸ್ಕಿ ತಾಲೂಕು ಮ್ಯಾಗರ ಹಾಳ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು 2017ರಲ್ಲಿ ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾರೀ ಹುಮ್ಮಸ್ಸಿನಿಂದ ಉದ್ಘಾಟನೆಯನ್ನೂ ಮಾಡಿದ್ದರು. ಆದರೆ, ಉದ್ಘಾಟನೆಯಾಗಿದ್ದೇ ಭಾಗ್ಯವೆಂಬಂತೆ, ಅವುಗಳು ಅಂದಿನಿಂದ ಇಂದಿನವರೆಗೂ ಕಾರ್ಯಾಚರಣೆ ಆರಂಭಿಸಿಲ್ಲ. ಅವುಗಳಿಂದ ಶುದ್ಧ ಕುಡಿಯುವ ನೀರನ್ನು ಸ್ಥಳೀಯರು ಪಡೆಯಲೂ, ಕುಡಿಯಲೂ ಸಾಧ್ಯವಾಗಿಲ್ಲ ಎಂದು ಊರಿನ ಜನ ಬೇಸರ ವ್ಯಕ್ತಪಡಿಸಿದ್ದಾರೆ.
“ಜಿಲ್ಲೆಯ ಮಾನ್ವಿ, ದೇವದುರ್ಗ, ಲಿಂಗಸೂಗೂರು ತಾಲೂಕಿನ ಸುತ್ತಮುತ್ತ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ತತ್ತರಿಸಿಹೋಗಿದ್ದಾರೆ. ಕಲುಷಿತ ನೀರು ಕುಡಿದು ಬಹುತೇಕ ಮಂದಿ ಮೃತಪಟ್ಟಿದ್ದಾರೆ. ಕೆಲವರು ಆಸ್ಪತ್ರೆ ಸೇರಿದ್ದಾರೆ. ಕಲುಷಿತ ನೀರಿನಿಂದ ಸಂಭವಿಸಿದ ಪ್ರಕರಣಗಳಿಂದಾಗಿ ಈ ಭಾಗದ ಜನರು ನೀರು ಕುಡಿಯುವುದಕ್ಕೂ ಭಯಪಡುವ ಸನ್ನಿವೇಶ ಸೃಷ್ಟಿಸಿವೆ. ಕುಡಿಯುವ ನೀರಿನ ಸಮಸ್ಯೆ ಜನರನ್ನು ಬಾಧಿಸುತ್ತಿದ್ದರೂ, ಇಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ” ಎಂಬುದು ಸ್ಥಳೀಯರ ಆರೋಪ.
ಸ್ಥಳೀಯ ನಿವಾಸಿ ಅಮರೇಶ್ ಮ್ಯಾಗರಹಾಳ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “2017ರಲ್ಲಿ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಆದರೆ ಈವರಗೆ ಒಮ್ಮೆಯೂ ಕುಡಿಯುವ ನೀರು ಉಪಯೋಗಿಸಿಲ್ಲ. ಹಾಗೆಯೇ ಹಾಳು ಬಿದ್ದಿದೆ. ನೀರಿನ ಘಟಕ ಸುತ್ತಮುತ್ತ ಕಸಕಡ್ಡಿ ಬಿದ್ದಿದ್ದು, ಸ್ವಚ್ಛತೆ ಇಲ್ಲದಂತಾಗಿದೆ. ಹತ್ತಿರ ಮನೆ ಇದ್ದವರೇ ಅದನ್ನು ಸ್ವಚ್ಛಗೊಳಿಸುತ್ತಾರೆ” ಎಂದು ಹೇಳಿದರು.

“ಚುನಾವಣೆ ಸಂದರ್ಭದಲ್ಲಿ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಅವರು ಪ್ರಚಾರಕ್ಕೆ ಬಂದಾಗ ಊರಿನ ಜನರು ಇದರ ಬಗ್ಗೆ ಅವರ ಗಮನಕ್ಕೆ ತಂದಿದ್ದರು. ಶಾಸಕರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗೆ ಮಾತನಾಡಿ ತಿಳಿಸಿದ್ದರು. ಆದರೆ, ಈವರೆಗೂ ಯಾವುದೇ ಅಭಿವೃದ್ಧಿಯಾಗಿಲ್ಲ. ಗ್ರಾಮದಲ್ಲಿ ಸುಮಾರು 200ಕ್ಕಿಂತ ಹೆಚ್ಚು ಮನೆಗಳಿವೆ. ಈವರೆಗೂ ಬೋರ್‌ವೆಲ್ ನೀರೇ ಗತಿಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೆದಕಿನಾಳ ಗ್ರಾಮ ಪಂಚಾಯಿತಿ ಪಿಡಿಒ ತಿಮ್ಮಣ್ಣ ಭೋವಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶುದ್ಧ ಕುಡಿಯುವ ನೀರಿನ ಘಟಕ ಪಂಚಾಯಿತಿಗೆ ಸಂಬಂಧಿಸಿಲ್ಲ. ನೀರಿನ ಸ್ಥಾವರ ಟೆಂಡರ್ ಹಿಡಿದವರು ಅದನ್ನು ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ. ಅದು ಯಾವ ಕಾರಣಕ್ಕೂ ನಮಗೆ ಗೊತ್ತಿಲ್ಲ” ಎಂದು ಹೇಳಿದರು.
“ನೀರಿನ ಘಟಕದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ನಾವು ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅದು ಪೂರ್ಣ ಆದ ಮೇಲೆ ನಮಗೆ ವಹಿಸಿದರೆ, ನಾವೇ ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ಮಂಡ್ಯ | ಅಡ್ಡಾಳ ನಾಲೆಗಿಲ್ಲ ಸೇತುವೆ ಕಾಯಕಲ್ಪ; ಕಲುಷಿತ ನೀರನಲ್ಲೇ ನಡೆದಾಡುವ ರೈತರು
ಶುದ್ಧ ಕುಡಿಯುವ ನೀರಿನ ಘಟಕ 2017ರಲ್ಲೇ ಸ್ಥಾಪನೆ ಮಾಡಿದ್ದರೂ ಈವರಗೆ ಕಾರ್ಯಾಚರಣೆ ಆರಂಭವಾಗದಿರುವುದು ದುರಂತವೇ ಸರಿ. ಈ ನಡೆ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಜನಪ್ರತಿನಿಧಿಗಳ ಆಸಕ್ತಿಗೆ ಹಿಡಿದ ಕನ್ನಡಿಯಾಗಿದೆ. ಕಲುಷಿತ ನೀರಿನಿಂದ ಅಸ್ವಸ್ಥರಾಗುತ್ತಿರುವ ವರದಿಗಳು ಬಂದರೂ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಸರ್ಕಾರ ಗಮನ ಹರಿಸದಿರುವುದು ಶೋಚನೀಯವಾಗಿದೆ.
“ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತುಕೊಂಡು ಶುದ್ಧ ಕುಡಿಯುವ ನೀರಿನ ಘಟಕವನ್ನು ಕಾರ್ಯಾಚರಣೆಗೊಳಿಸಿ ಕುಡಿಯಲು ಶುದ್ಧ ನೀರು ಒದಗಿಸಬೇಕು. ಕಲುಷಿತ ನೀರಿನಿಂದ ಅಸ್ವಸ್ಥದಂತಹ ಪ್ರಕರಣಗಳು ವರದಿಯಾಗದಂತೆ ತಡೆಗಟ್ಟಬೇಕು” ಎಂದು ಸ್ಥಳೀಯರು ಒತ್ತಾಯಿಸಿದರು.