ಕಾರ್ಮಿಕರ ಪರವಾದ ಕಾಯ್ದೆಯನ್ನು ಜಾರಿಗೊಳಿಸದೇ ಹೊಸ ಕಾಯ್ದೆಗಳನ್ನು ಅಂಗೀಕರಿಸಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಲು ಮುಂದಾಗುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
“ಕಾರ್ಪೊರೇಟ್ ಕಂಪನಿ ಹಾಗೂ ಬಂಡವಾಳಶಾಹಿಪರ ನೀತಿಗಳನ್ನು ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವ ಪ್ರಧಾನಿ ಮೋದಿ ಸರ್ಕಾರ ನಡೆಯನ್ನು ಖಂಡಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಮಿಕರಿಗೆ ಕನಿಷ್ಠ ವೇತನ, ಭದ್ರತೆ ಒದಗಿಸಿ ಕಾರ್ಮಿಕರನ್ನು ರಕ್ಷಣೆ ಮಾಡದ ಕೇಂದ್ರ ಸರ್ಕಾರ ಕಾರ್ಮಿಕರ ಶ್ರಮವನ್ನು ಅಗ್ಗದ ದರದಲ್ಲಿ ಸುಲಿಗೆ ಮಾಡುತ್ತಿದೆ” ಎಂದು ಆಕ್ರೋಶ ಹೊರಹಾಕಿದರು.
“ಕಾರ್ಮಿಕರ ವಿರೋಧಿಯಾಗಿರುವ 4 ಕಾಯ್ದೆಗಳನ್ನು ರದ್ದುಗೊಳಿಸಲು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆ ಕರೆ ನೀಡಿದ ಹಿನ್ನೆಲೆಯಲ್ಲಿ ಬೆಂಬಲಿಸಿ ಪ್ರತಿಭಟನೆ ನಡೆಸಲಾಯಿತು. ಕನಿಷ್ಠ ವೇತನವನ್ನು ಜಾರಿಗೊಳಿಸಿ ಎಲ್ಲಾ ಕಾರ್ಮಿಕರಿಗೆ ಕನಿಷ್ಠ 31,500 ರೂ ವೇತನ ನೀಡಬೇಕು. 8 ಗಂಟೆ ಕೆಲಸದ ಸಮಯ ನಿಗದಿಪಡಿಸಬೇಕು. ಸಾಮಾಜಿಕ ಭದ್ರತೆ ಒದಗಿಸಿಕೊಡಬೇಕು. ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ರದ್ದುಪಡಿಸಿ ಸಮಾನ ವೇತನವನ್ನು ಖಚಿತಪಡಿಸಬೇಕು ಹಾಗೂ ವಲಸೆ ಕಾರ್ಮಿಕರಿಗೆ ರಕ್ಷಣೆ ಒದಗಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ರಾಯಚೂರು | ನಕಲಿ ನೋಟು ಚಲಾವಣೆ; ಎಎಸ್ಐ ಸೇರಿ ನಾಲ್ವರ ಬಂಧನ
ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಜಿ.ಅಮರೇಶ, ಜಿ.ಅಡವಿರಾವ್, ವೆಂಕಟೇಶ, ಆಂಜನೇಯ, ಸತ್ಯಪ್ಪ, ಶಫಿ, ಶೇಖ್ ಹುಸೇನ್ ಬಾಷಾ, ರಾಮು, ರಾಜು, ಕರಿಮುಲ್ಲಾ, ಪ್ರಕಾಶ ಸೇರಿದಂತೆ ಅನೇಕರು ಇದ್ದರು.
