ತಿಂಥಣಿ ಬ್ರಿಜ್-ರಾಯಚೂರು ರಸ್ತೆ ಮಾರ್ಗದಲ್ಲಿ ನಿರ್ಮಿಸಲಾಗುತ್ತಿರುವ ಟೋಲ್ ಗೇಟ್ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕೆಂದು ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಒತ್ತಾಯಿಸಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅವರಿಗೆ ಮನವಿ ಸಲ್ಲಿಸಿತು.
“ಈ ರಸ್ತೆಯಲ್ಲಿ ರೈತರೇ ಹೆಚ್ಚಾಗಿ ಸಂಚರಿಸುತ್ತಾರೆ. ಯಾವುದೇ ದೊಡ್ಡ ಪ್ರಮಾಣದ ಕೈಗಾರಿಕೆಗಳಿಲ್ಲ. ಯಾವುದೇ ಉದ್ದಿಮೆಗಳಿಲ್ಲ.ರಾಜ್ಯ ಮುಖ್ಯ ಹೆದ್ದಾರಿಗಾಗಲೀ, ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಇದಾಗಿರುವದಿಲ್ಲ. ಕೇವಲ ಮಧ್ಯಮ ಮತ್ತು ಕೃಷಿಕರು ಜತೆಗೆ ಪ್ರಯಾಣಿಕರು ಸಂಚರಿಸುತ್ತಾರೆ. ಕಡಿಮೆ ಅಂತರದಲ್ಲಿಯೇ ಎರಡೆರಡು ಟೋಲ್ ಗೇಟ್ ಗಳನ್ನು ಅಳವಡಿಸಿ ಕರವಸೂಲಿ ಮಾಡುವ ಕುತಂತ್ರ ಆಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನೀರಾವರಿ ಸೌಲಭ್ಯ ಬಂದ ಬಳಿಕ ರೈತರು ಬೆಳೆದ ಬೆಳೆಗೆ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಅಪೂರ್ಣ ಕಾಮಗಾರಿಗಳಿಂದಾಗಿ ರೈತರ ಜಮೀನುಗಳಿಗೆ ಸಮರ್ಪಕ ನೀರು ದೊರಯುತ್ತಿಲ್ಲ. ಆದರೆ ನೀರಾವರಿ ಇರುವ ಕಾರಣಕ್ಕಾಗಿ ವಿವಿಧ ರೂಪದಲ್ಲಿ ತೆರಿಗೆ ಹೆಚ್ಚಾಗಿದೆ. ಇಂಥ ಸಂಕಷ್ಟದಲ್ಲಿರುವ ರೈತರಿಗೆ, ಕೃಷಿ ಕೂಲಿಕಾರರ ಕುಟುಂಬಗಳಿಗೆ ಟೋಲ್ ಗೇಟ್ ಕರವಸೂಲಿ ಹೊರೆಯಾಗುತ್ತದೆ” ಎಂದು ಅಸಮಾಧಾನಗೊಂಡರು.
ಕೂಡಲೇ ಜಿಲ್ಲಾಡಳಿತ ಈ ನಿರ್ಧಾರದ ಒಳ ಹೊರನೋಟ ಪರೀಕ್ಷಿಸಿ ಟೋಲ್ ಗೇಟ್ ಗಳನ್ನು ರದ್ದುಪಡಿಸಬೇಕೆಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ: ಸಮೀರ್ ಶುಕ್ಲಾ
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಗಿರಿಲಿಂಗಯ್ಯ ಸ್ವಾಮಿ, ದುರುಗಣ್ಣ ಇರಬಗೇರಾ, ಬಾಬಾ, ಮಲ್ಲೇಶ, ಸಿದ್ದಲಿಂಗಪ್ಪ ಇನ್ನಿತರರು ಹಾಜರಿದ್ದರು.
