ನಗರದಲ್ಲಿ ಮೂರು ದಿನಗಳಿಗೊಮ್ಮೆ ನೀರು ಬಿಡುವುದಾಗಿ ನಗರಸಭೆ ಪೌರಾಯುಕ್ತರು ಪ್ರಕಟಿಸಲು ಅಧಿಕಾರ ಇಲ್ಲ. ನಗರಸಭೆ ಸದಸ್ಯರು ಹಾಗೂ ಶಾಸಕರೊಂದಿಗೆ ಚರ್ಚಿಸದೇ ಪ್ರಕಟಿಸಿರುವುದನ್ನು ಹಿಂಪಡೆಯಬೇಕು. ಇಲ್ಲದೇ ಹೋದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು.
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾರಾಯಣಪುರ ಜಲಾಶಯ ಮತ್ತು ಗಣೇಕಲ್ ಜಲಾಶಯದಲ್ಲಿ ನೀರು ಸಂಗ್ರಹವಿದೆ. ಆದರೂ, ಮೂರು ದಿನಗಳಿಗೊಮ್ಮೆ ನೀರು ಬಿಡುವದಾಗಿ ಹೇಳುತ್ತಿದ್ದಾರೆ. ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು, ಸದಸ್ಯರು, ಶಾಸಕರು, ಸಂಸದರು ಹಾಗೂ ಸದಸ್ಯರೊಂದಿಗೆ ಸಭೆ ನಡೆಸದೇ ಏಕಾಎಕಿ ಪ್ರಕಟಿಸಿದ್ದಾರೆ. ಅವರಿಗೆ ಈ ಅಧಿಕಾರವಿಲ್ಲ. ಕೂಡಲೇ ಸಭೆ ಕರೆದು ತೀರ್ಮಾನ ಪ್ರಕಟಿಸಬೇಕು.
ನಗರಸಭೆ ಪೌರಾಯುಕ್ತರು ಕುಡಿಯುವ ನೀರಿನ ಗೊಂದಲ ಸೃಷ್ಟಿಸುವ ಜೊತೆಗೆ ಮುಟ್ಯೇಷನ್, ಇ-ಖಾತಾ ನೀಡುವುದನ್ನು ತಡೆದಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿ ನೀಡಬಹುದಾಗಿದ್ದರೂ ಅನಗತ್ಯವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಗರದಲ್ಲಿ ಸ್ವಚ್ಚತೆ ಸೇರಿದಂತೆ ಯಾವುದೇ ಕಾಮಗಾರಿಗಳನ್ನು ಸಹ, ಪೌರಾಯುಕ್ತರು ಬಡಾವಣೆಗೆ ಆಗಮಿಸಿ ವೀಕ್ಷಣೆ ಮಾಡಿಲ್ಲ.
ಬೇಸಿಗೆ ದಿನಗಳು ಸಮೀಪಿಸುವ ಮುನ್ನವೇ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆವಹಿಸಬೇಕಿದೆ. ಅನಗತ್ಯವಾಗಿ ಸಮಸ್ಯೆಯನ್ನು ಸೃಷ್ಟಿಸಬಾರದು. ಆಡಳಿತಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು, ಪೌರಾಯುಕ್ತರಿಗೆ ನಿರ್ದೇಶನ ನೀಡಬೇಕು. ಇಲ್ಲದೇ ಹೋದಲ್ಲಿ ನಗರಸಭೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು. ನಗರ ಜನತೆ ಹಾಗೂ ಪತ್ರಕರ್ತರು ಸಹ ಆತ್ಮಾವಲೋಕನ ಮಾಡಿಕೊಳ್ಳಬೇಕು. ಚರಂಡಿಗೆ ಕಸ ಹಾಕುವುದನ್ನು ನಿಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಶಶಿರಾಜ, ಎನ್. ಕೆ. ನಾಗರಾಜ, ಬಿಜೆಪಿ ನಗರ ಅಧ್ಯಕ್ಷ ಬಿ.ಗೋವಿಂದ, ಆರ್‌ಡಿಎ ಮಾಜಿ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಮಹೇಂದ್ರರೆಡ್ಡಿ, ಯು.ನರಸರೆಡ್ಡಿ, ಗುಡ್ಡಿ ನರಸರೆಡ್ಡಿ, ವೀರೇಶ್ ಪೋಗಲ್ ಉಪಸ್ಥಿತರಿದ್ದರು.
ವರದಿ : ಸಿಟಿಜನ್ ಜರ್ನಲಿಸ್ಟ್, ಹಫೀಜುಲ್ಲ