ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ನೀರು ಹರಿಸಿದ್ದು ಮೇಲ್ಬಾಗದಲ್ಲಿ ಅಕ್ರಮವಾಗಿ ಹೆಚ್ಚಿನ ನೀರಾವರಿ ಬೆಳೆಗೆ ನೀರು ಬಳಸಿಕೊಳ್ಳುತ್ತಿರುವುದರಿಂದ ಕೊನೆ ಭಾಗದ ಸಿರವಾರ ವ್ಯಾಪ್ತಿಯಲ್ಲಿ ಗೇಜ್ ನಿರ್ವಹಣೆಯಾಗದೇ ನೀರು ತಲುಪುತ್ತಿಲ್ಲ. ಅಕ್ರಮ ನೀರಾವರಿಗೆ ಅಳವಡಿಸಿರುವ ಟಿಸಿ ತೆರವುಗೊಳಿಸುವುದರ ಜೊತೆಗೆ ಸಮರ್ಪಕವಾಗಿ ಗೇಜ್ ನಿರ್ವಹಣೆ ಮಾಡಬೇಕು. ಗೇಜ್ ನಿರ್ವಹಣೆಗೆ ಟೆಲಿ ಮೀಟರ್ ಅಳವಡಿಕೆ ಮಾಡಲು 07 ದಿನಗಳ ಕಾಲ ಗಡುವು ನೀಡಲಾಗುವುದು. ಸರಿಪಡಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ವಹಿಸುವುದಾಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಎಚ್ಚರಿಕೆ ನೀಡಿದ್ದಾರೆ.
ರಾಯಚೂರಿನಲ್ಲಿ ನಡೆದ ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಯ ಕಾಲುವೆಗಳಿಗೆ ನೀರು ಹರಿಸುವ ಕುರಿತು ನೀರಾವರಿ ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ಸಭೆಯಲ್ಲಿ ಅವರು ಮಾನತಾಡಿದರು. “ಮೇಲ್ಬಾಗದಲ್ಲಿ ಅಕ್ರಮ ನೀರಾವರಿಯಿಂದ ಕೆಳಭಾಗಕ್ಕೆ ನೀರು ತಲುಪದೇ ರೈತರು ಹೋರಾಟ ಮಾಡಿದ್ದು, ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ತಡೆಗೆ ವಿದ್ಯುತ್ ಸಂಪರ್ಕ ಕಡಿತದ ಜೊತೆಗೆ ಟಿ ಸಿ ಅಳವಡಿಕೆ ಮಾಡಿರುವುದನ್ನು ತೆರವುಗೊಳಿಸಬೇಕು. 47 ಮೈಲ್‌ನಲ್ಲಿ 11.80 ರಿಂದ 11.90 ವರೆಗೆ ನಿರ್ವಹಣೆ ಆಗಬೇಕು. ಕೆಳಭಾಗದಲ್ಲಿಯೂ ಸಮರ್ಪಕವಾಗಿ ಗೇಜ್ ನಿರ್ವಹಣೆ ಮಾಡಬೇಕು” ಎಂದು ಸೂಚಿಸಿದರು.
“ಈ ಹಿಂದೆ ಕೊಪ್ಪಳ ಸಭೆಯಲ್ಲಿ ಸೂಚಿಸದಂತೆ ವಡ್ಡರಹಟ್ಟಿಯಿಂದ ಹಿಡಿದು ಕೊನೆ ಭಾಗದವರೆಗೆ ಗೇಜ್ ನಿರ್ವಹಣೆ ಮಾಡಿದರೆ, ರೈತರಿಗೆ ನೀರು ದೊರೆಯುತ್ತದೆ. ಮೈಲ್ ನಂ.104 ರಲ್ಲಿ 5.5 ಗೇಜ್ ನಿರ್ವಹಣೆ ಮಾಡಿದರೆ ನೀರು ದೊರೆಯಲು ಸಾಧ್ಯ. ಮೈಲ್ ನಂ.69ರಲ್ಲಿ ಪ್ರಸ್ತುತ 8.5೦ ಅಡಿ ಮತ್ತು 104 ರಲ್ಲಿ 5.5 ಅಡಿ ಗೇಜ್ ನಿರ್ವಹಣೆ ಆಗಬೇಕು” ಎಂದರು.
“ಮೈಲ್ ನಂ.47ರಲ್ಲಿ 11.50 ಅಡಿ ಮೈಲ್ ನಂ.8.40 ಅಡಿ ನಿರ್ವಹಣೆಯಾಗಬೇಕಿದೆ. ಕೆಳಬಾಗಕ್ಕೆ ಸಂಪೂರ್ಣವಾಗಿ ನೀರು ಒದಗಿಸಲು ಮೇಲ್ಬಾಗದಿಂದ ಕೆಳ ಭಾಗದವರೆಗೆ ಕಾಲುವೆಗಳ ಗೇಜ್ ಪರಿಶೀಲನೆ ಮತ್ತು ಗೇಜ್ ಅಳವಡಿಕೆ ಕ್ರಮವಹಿಸಲು ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ಸಭೆ ಮಾಡಿ ಮೇಲ್ಭಾಗದಿಂದ ಕೆಲ ಭಾಗದವರೆಗೆ ಗೇಜ್ ಪರಿಗಣಿಸಿ ಸರಿಪಡಿಸಬೇಕು” ಎಂದು ತಿಳಿಸಿದರು.
ರೈತ ಮುಖಂಡ ಚಾಮರಸ ಮಾಲಿ ಪಾಟೀಲ್ ಮಾತನಾಡಿ, “ಮೇಲ್ಬಾಗದಲ್ಲಿ ಅಕ್ರಮ ನೀರಾವರಿಯಿಂದ ಕೆಳಭಾಗಕ್ಕೆ ನೀರು ತಲುಪುತ್ತಿಲ್ಲ. ಜೊತೆಗೆ ಎಡದಂಡೆ ಕಾಲುವೆ ಮೇಲೆ ಹೋಗಲು ಸೂಕ್ತ ರಸ್ತೆ ನಿರ್ಮಿಸಿ ಜಂಗಲ್ ಕಟಿಂಗ್ ಮಾಡಬೇಕು ಹಾಗೂ ಅಕ್ರಮವಾಗಿ ಅಳವಡಿಸಿರುವ ಪೈಪ್‌ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು” ಎಂದು ಒತ್ತಾಯಿಸಿದರು.
“ಮೇಲ್ಬಾಗದಲ್ಲಿ ಅಕ್ರಮ ತಡೆದರೆ ಕೆಳಭಾಗಕ್ಕೆ ನೀರು ತಲುಪಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನೀರಾವರಿ ಅಧಿಕಾರಿಗಳಿಗೆ ಆದೇಶ ಮಾಡಿ ಸಮರ್ಪಕ ಗೇಜ್ ನಿರ್ವಹಣೆಗೆ ಆದೇಶಿಸಬೇಕು” ಎಂದರು.
ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮಾತನಾಡಿ, “ಕಾಲುವೆಯಲ್ಲಿ ಗೇಜ್ ನಿರ್ವಹಣೆ ಇಲ್ಲದೆ ಇರುವುದರಿಂದ ಕೆಳ ಭಾಗಕ್ಕೆ ನೀರು ತಲುಪುತ್ತಿಲ್ಲ. ಗೇಜ್ ನಿರ್ವಹಣೆಯಲ್ಲಿ ವ್ಯತ್ಯಾಸವಾಗುತ್ತಿದ್ದು, ಕೂಡಲೇ ಸರಿಪಡಿಸಬೇಕು. ಹಂತ ಹಂತವಾಗಿ ಅಧಿಕಾರಿಗಳು ಕಾಲುವೆ ಮೇಲೆ ಪರಿಶೀಲನೆ ಮಾಡಿ, ಗೇಜ್ ನಿರ್ವಹಣೆಗೆ ಸೂಚನೆ ನೀಡಬೇಕು” ಎಂದು ತಿಳಿಸಿದರು.
ಮಾನ್ವಿ ಶಾಸಕ ಹಂಪಯ್ಯ ಸಾಹುಕಾರ ಮಾತನಾಡಿ, “ಕಾಲುವೆ ಮೇಲೆ ಪೋಲಿಸ್ ಬಂದೋಬಸ್ತಿನೊಂದಿಗೆ ಕಾಲುವೆ ಗೇಜ್ ನಿರ್ವಹಣೆ ಮಾಡಬೇಕು. ರೈತರೂ ಕೂಡ ಕಾಲುವೆ ಮೇಲೆ ಬರಲು ಹೆದರುತ್ತಾರೆ. ಆಗ ಸುಲಭವಾಗಿ ನೀರನ್ನು ಕೊನೆಭಾಗದವರೆಗೆ ಹರಿಸಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಎಸ್‌ಸಿಬಿ ನಿಖಿಲ್, ಸಹಾಯಕ ಆಯುಕ್ತೆ ಮಹೆಬೂಬಿ, ನೀರಾವರಿ ಅಧಿಕಾರಿಗಳು, ರೈತ ಮುಖಂಡರುಗಳಾದ ನಾಗನಗೌಡ ಹರವಿ, ಶಂಕರ್ ಗೌಡ ಹರವಿ, ಅಮರೇಶ ಬಲ್ಲಟಗಿ, ಮಾಜಿ ಶಾಸಕ ಗಂಗಾಧರ ನಾಯಕ ಸೇರಿದಂತೆ ರೈತರು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು.