ಲಿಂಗತ್ವ ಅಲ್ಪಸಂಖ್ಯಾತರಾದ ನಾವು ಅಂತರಲಿಂಗವನ್ನು ನಿರ್ಧರಿಸುವ ಮಹಾಲಿಂಗಿಗಳಾಗಿದ್ದೇವೆ. ನಾವು ಭಿಕ್ಷಾಟನೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂವಿಧಾನದಲ್ಲಿ ನಮಗೂ ಹಕ್ಕಿದೆ. ನಮ್ಮನ್ನು ಗೌರವದಿಂದ ನಡೆಸಿಕೊಳ್ಳಿ ಎಂದು ಲೇಖಕಿ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಹೇಳಿದರು.
ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ “ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ ಹಕ್ಕುಗಳು, ಸಮಾನತೆ, ಸಬಲೀಕರಣ” ವಿಷಯ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಸಂವಿಧಾನ ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರೂ ಸೇರಿದಂತೆ ಸರ್ವರಿಗೂ ಸಮಾನ ಅವಕಾಶ ನೀಡಿದೆ. ಅಲ್ಪಸಂಖ್ಯಾತರ ಕುರಿತು ಸಮಾಜಕ್ಕಿರುವ ತಾತ್ಸಾರದ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಸಮುದಾಯದ ನೋವುಗಳನ್ನು ಹಂಚಿಕೊಳ್ಳುವುದರ ಜೊತೆಗೆ ಹೋರಾಟದಿಂದಲೇ ಸಂವಿಧಾನದ ಗುರಿಗಳನ್ನು ತಲುಪಬೇಕಿದೆ” ಎಂದರು.
ಇದನ್ನೂ ಓದಿ: ರಾಯಚೂರು | ಎಸ್ಸಿ ಎಸ್ಟಿ ಹಣ ದುರ್ಬಳಕೆ; ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ
ಈ ವೇಳೆ ವಿವಿಯ ಹಂಗಾಮಿ ಕುಲಪತಿ ಡಾ.ಸುಯಮೀಂದ್ರ ಕುಲಕರ್ಣಿ, ಉಪ ಕುಲಸಚಿವ ಡಾ.ಕೆ.ವೆಂಕಟೇಶ್, ಡೀನರಾದ ಶಿಕ್ಷಣ ನಿಕಾಯದ ಪ್ರೊ.ಪಾರ್ವತಿ ಸಿ.ಎಸ್ ವೇದಿಕೆ ಮೇಲೆ ಉಪಸ್ಥಿತರಿದ್ದರು, ವಾಣಿಜ್ಯ ನಿಕಾಯದ ಪ್ರೊ.ಪಿ.ಭಾಸ್ಕರ್, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ, ತಾಯಪ್ಪ.ಟಿ, ಸಸ್ಯಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ ಪನ್ನಗವೇಣಿ, ಮಹಿಳಾ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕ ಡಾ.ಭೀಮೇಶ ಮಾಚನೂರು, ಕಾರ್ಯಕ್ರಮ ಸಂಯೋಜಕಿ ಡಾ.ಶಾಂತಾದೇವಿ ಪಾಟೀಲ, ಪೂಜಾ ಮುರಾರಿ, ಅನಿಲ್ ಮಾಣಿಕ್ ಹಾಗೂ ಇತರರು ಇದ್ದರು.
