ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಗಲಗ, ಅರಕೇರಾ, ಗಣೇಕಲ್ ಸೇರಿದಂತೆ ರಾಯಚೂರಿನ ಹಲವೆಡೆ ಸಜ್ಜೆ, ಭತ್ತ ಸೇರಿ ವಿವಿಧ ಬೆಳೆಗಳು ನೆಲಕಚ್ಚಿದ್ದು, ರೈತರು ಕಂಗಾಲಾಗಿದ್ದಾರೆ.
ದೇವದುರ್ಗ ಭಾಗದ ರೈತರು ಎಡದಂಡೆ ಹಾಗೂ ಬಲದಂಡೆ ಕಾಲುವೆಗೆ ನೀರು ಹರಿಸಬೇಕು ಎಂದು ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದರೆ, ಇನ್ನೊಂದು ಕಡೆ ಮಳೆ ಗಾಳಿಯಿಂದ ಬೆಳೆ ಎಲ್ಲಾ ಹಾನಿಯಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
“ಮೂರು ಎಕರೆಯಲ್ಲಿ ಸಜ್ಜೆ ಬೆಳೆದಿದ್ದೆ. ಇನ್ನೊಂದು ವಾರದಲ್ಲಿ ಕೊಯ್ಲಿಗೆ ಸಿದ್ಧತೆ ನಡೆಸಿದ್ದೆ. ಈ ಬಾರಿ ಎಕರೆಗೆ 20 ಚೀಲ ಇಳುವರಿ ನಿರೀಕ್ಷಿಸಿದ್ದೆ. ಈಗ ಶೇ 50ಕ್ಕಿಂತ ಹೆಚ್ಚು ಬೆಳೆ ನಾಶ ಆಗಿದೆ. ಬೆಳೆ ನೋಡಿದರೆ ಕಣ್ಣೀರು ಬರುತ್ತಿದೆ. ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ” ಎಂದು ರೈತ ಶಿವನಗೌಡ ನಾಯಕ ಕಳವಳ ವ್ಯಕ್ತಪಡಿಸಿದರು.

“ಬೆಳೆಗೆ ನಾಟಿ ಮಾಡಿ ಆಗಲೇ ಒಂದೆರೆಡು ಬಾರಿ ಕ್ರಿಮಿನಾಶಕ, ಗೊಬ್ಬರ ಸಿಂಪಡಿಸಿ ಲಕ್ಷಾಂತರ ರೂ ಖರ್ಚು ಮಾಡಿದ್ದೇನೆ. ಎಕರೆಗೆ ಏನಿಲ್ಲವೆಂದರೂ 25-30 ಸಾವಿರ ರೂ ಖರ್ಚಾಗಿದೆ. ಇನ್ನೂ ಕೆಲವು ರೈತರು ಲೀಜ್ ಪಡೆದುಕೊಂಡಿದ್ದು ಜಮೀನು ಮಾಲಿಕರಿಗೆ ಆಗಲೇ ಹಣ ಪಾವತಿ ಮಾಡಿದ್ದಾರೆ. ಜತೆಗೆ ಬೆಳೆಗೂ ಖರ್ಚು ಮಾಡಿದ್ದು ನಷ್ಟ ಮೈಮೇಲೆ ಎಳೆದುಕೊಂಡಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಯಚೂರು | ‘ಏಮ್ಸ್ʼ ಮಂಜೂರಿಗೆ ಸಂಸದರ ಸಕರಾತ್ಮಕ ಪ್ರತಿಕ್ರಿಯೆ: ಬಸವರಾಜ ಕಳಸ
ಬೆಳೆದಿದ್ದ ಬೆಳೆಯೆಲ್ಲಾ ಮಳೆ ಗಾಳಿಗೆ ಹಾನಿಯಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದ್ದು, ಸರಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡುತ್ತಿದ್ದಾರೆ.