ಅಸಂಘಟಿತ ವಲಯದ ಕಾರ್ಮಿಕರು ಸಾಮಾಜಿಕ ಅಭದ್ರತೆ, ಅನಕ್ಷರತೆ ಹಾಗೂ ಅನೇಕ ಸಮಸ್ಯೆ ಎದುರಿಸುತ್ತಿದ್ದು, ಯುವ ನಾಯಕರು ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಬೇಕು ಎಂದು ರಾಯಚೂರು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಜೆ.ಬಿ ರಾಜು ಸಲಹೆ ನೀಡಿದರು.
ಸ್ಲಂ ಜನಾಂದೋಲನ ಕರ್ನಾಟಕ, ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ನಗರದ ಕನ್ನಡ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳಾ ಮತ್ತು ಯುವ ಜನರ ನಾಯಕತ್ವ ಹಾಗೂ ಅಸಂಘಟಿತ ವಲಯ ಕಾರ್ಮಿಕರ ಸವಾಲುಗಳು ಕುರಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಅನಕ್ಷರತೆ, ಅಜ್ಞಾನ, ರಾಜಕೀಯ ನಾಯಕರ ನಿಷ್ಕಾಳಜಿಯಿಂದ ಅಸಂಘಟಿತ ಕಾರ್ಮಿಕರು ಜರ್ಜರಿತರಾಗಿದ್ದಾರೆ. ಯುವ ಪೀಳಿಗೆ ಹೊಸ ಚಿಂತನೆಗಳೊಂದಿಗೆ ಮಾರ್ಗದರ್ಶನ ನೀಡಬೇಕು ಎಂದರು. ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಮನುಷ್ಯನ ಜೀವನಕ್ಕೆ ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಹಾಗೂ ಆರೋಗ್ಯ ಮುಖ್ಯವಾಗಿದೆ.
ಸ್ಲಂ ಜನರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಶಿಕ್ಷಣ , ಆರೋಗ್ಯ ದುಬಾರಿಯಾಗಿದೆ. ಯುವಕರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು, ಸರ್ಕಾರ ಉದ್ಯೋಗವಕಾಶ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಹೇಳಿದರು.
ಇದನ್ನು ಓದಿದ್ದೀರಾ? ರಾಯಚೂರು | ಮುಸ್ಲಿಮರ ಅವಹೇಳನ; ಬಸನಗೌಡ ಯತ್ನಾಳ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ
ರಾಯಚೂರು ಸ್ಲಂ ಕ್ರಿಯಾ ವೇದಿಕೆ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ, ಎಂ.ಆರ್ ಬೇರಿ, ವಿದ್ಯಾ ಪಾಟೀಲ, ಕೆ.ಪಿ ಅನಿಲ್ ಕುಮಾರ, ಎಸ್ ರಾಜು ಉಪಸ್ಥಿತರಿದ್ದರು.
