ಮನರೇಗಾ ಯೋಜನೆಯಡಿಯಲ್ಲಿ ಹಲವು ಕಾಮಗಾರಿಗಳ ಅಂದಾಜು ತಯಾರಿಕೆ, ಗೋಮಾಳ ಅಭಿವೃದ್ಧಿ ಸೇರಿದಂತೆ ಇತರೆ ಕಾಮಗಾರಿಗಳನ್ನು ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ ಮನರೇಗಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್ ಅವರು ತರಾಟೆಗೆ ತೆಗೆದುಕೊಂಡರು.
ರಾಯಚೂರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮನರೇಗಾ ಯೋಜನೆ ಕುರಿತು ಹಮ್ಮಿಕೊಂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ತರಾಟೆಗೈದರು. ಮನರೇಗಾ ಯೋಜನೆಯಡಿಯಲ್ಲಿ ಬರುವ ಗೋಮಾಳ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಒಟ್ಟು 179 ಗ್ರಾಮ ಪಂಚಾಯಿತಿಗಳಲ್ಲಿ 114 ಗೋಮಾಳಗಳ ಗುರಿ ನೀಡಲಾಗಿದೆ. ಅವುಗಳಲ್ಲಿ ಕೇವಲ 30 ಗೋಮಾಳಗಳ ಅಭಿವೃದ್ಧಿಗೆ ಅಂದಾಜು ಸಿದ್ದಪಡಿಸಿದ್ದು, ಅದರಲ್ಲಿ 23 ಕಾಮಗಾರಿಗಳು ಮಾತ್ರ ಪ್ರಗತಿ ಹಂತದಲ್ಲಿವೆ. ಇನ್ನುಳಿದ ಗೋಮಾಳಗಳ ಸ್ಥಳ ಪರಿಶೀಲಿಸಿ ಹುಡುಕಾಟ ನಡೆಸುತ್ತಿದ್ದು, ಗೋಮಾಳ ಇರುವ ಕುರಿತು ಮಾಹಿತಿ ಇಲ್ಲದೇ ಇರುವುದರಿಂದ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ತೆರಳಿ ಕೆಲಸ ಮಾಡದೇ ಕೇಲವ ಕಾಟಾಚಾರಕ್ಕೆ ಮಾಹಿತಿ ನೀಡುತ್ತಿದ್ದ ಸಿಬ್ಬಂದಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
“ಗೋಮಾಳ ಅಭಿವೃದ್ಧಿಗೆ ಸುತ್ತಲೂ ಸರಹದ್ದು ಮಾಡಿ, ಒಂದೆಡೆ ಕುಡಿಯುವ ನೀರಿನ ಘಟಕ ನಿರ್ಮಿಸಿ ಮತ್ತೊಂದೆಡೆ ಮೇವು ಬೆಳೆಯಲು ಸಮತಟ್ಟು ಮಾಡಿ ಮಾಹಿತಿ ನೀಡಲು ಆಗುತ್ತಿಲ್ಲವೆ?” ಎಂದು ಅಸಮಧಾನ ವ್ಯಕ್ತಪಡಿಸಿದರು.
“ಮನಗರೇಗಾದಡಿ ಬಯೋಗ್ಯಾಸ್ ನಿರ್ಮಾಣಕ್ಕೆ ಜಿಲ್ಲೆಯಲ್ಲಿ 179 ಗ್ರಾಮ ಪಂಚಾಯತಿಗಳಲ್ಲಿ 358ಕ್ಕೆ ಗುರಿ ನೀಡಲಾಗಿದೆ, 301 ಬಯೋಗ್ಯಾಸ್ ಅಂದಾಜು ಸಿದ್ದಪಡಸಿದ್ದು, ಕೇವಲ 9ರ ಕಾಮಗಾರಿ ಮಾತ್ರ ಪ್ರಗತಿ ಹಂತದಲ್ಲಿದೆ. ಉಳಿದ ಕಾಮಗಾರಿ ಆರಂಭಿಸದೇ ಕುಂಟುನೆಪ ಹೇಳಿತ್ತಿದ್ದು, ಕೆಲಸ ಮಾಡಲು ಆಗದಿದ್ದರೆ ಮನೆಗೆ ತೆರಳಿ” ಎಂದರು.
“ಹಸಿರು ಸರೋವರ್ ಯೋಜನೆಯಡಿ ಜಿಲ್ಲೆಯಲ್ಲಿ 7ಕ್ಕೆ ಗುರಿ ನೀಡಿದೆ. 3 ಕಡೆ ಸ್ಥಳ ಗುರುತಿಸಿದ್ದು, ಮೂರೂ ಕಾಮಗಾರಿಗೆ ಅಂದಾಜು ಮಾಡಿದೆ. ಆದರೆ ಈವರೆಗೆ ಕೆಲಸ ಆರಂಭ ಮಾಡಿಲ್ಲ. ಹಸಿರು ಸರೋವರದ ಬಗ್ಗೆ ಏನು ಮಾಡಬೇಕೆಂಬ ಕಾನ್ಸೆಪ್ಟ್ ಗೊತ್ತಿಲ್ಲದಿದ್ದರೆ, ಕೆರೆಯ ಸುತ್ತಲೂ ಗಿಡಗಳನ್ನು ಬೆಳಸಿ ಮಣ್ಣು ಸವಕಳಿ ಆಗದಂತೆ ಕಾಪಾಡಿಕೊಂಡು ಹೋಗುವುದರ ಜೊತೆಗೆ ಸುತ್ತಮುತ್ತಲಿನ ಪ್ರದೇಶ ಹಸಿರಿನಿಂದ ಇರುವಂತೆ ಮಾಡುವುದು ಹಸಿರು ಸರೋವರದ ಉದ್ದೇಶವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ಕಂಡು ಬಂದಲ್ಲಿ ಅಧಿಕಾರಿಗಳ ಅಮಾನತು; ಡಿಸಿ ಎಚ್ಚರಿಕೆ
“ಹಸಿರು ಸರೋವರ್ ಯೋಜನೆ ಕೆರೆ ಗುರುತಿಸಿಲ್ಲ, ಅಂದಾಜು ಮಾಡಿದೆ. ಕಾಮಗಾರಿ ಆರಂಭ ಮಾಡಬೇಕು ಎಂದು ಹೇಳುತ್ತಿದ್ದು ಕೆಲಸ ಯಾವಾಗ ಮಾಡಿ ಮುಗಿಸಬೇಕು, ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಹಸಿರು ಸರೋವರದ ಬಗ್ಗೆ ಎಲ್ಲಿ ತೋರಿಸಬೇಕು” ತರಾಟೆಗೆ ತೆಗೆದುಕೊಂಡರು.
ಮನರೇಗಾ ಸಿಬ್ಬಂದಿಗಳು ಸಭೆಯಲ್ಲಿ ಇದ್ದರು.