ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ರೋಡಲ ಬಂಡಾ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣವಾಗಿ 9 ವರ್ಷ ಕಳೆದಿದ್ದರೂ ಉದ್ಘಾಟನೆ ಭಾಗ್ಯ ಕಾಣದೆ ಪಾಳು ಬಿದ್ದಂತಾಗಿದೆ. ಅಂಗನವಾಡಿ ಕಟ್ಟಡದ ಸುತ್ತಲೂ ಆಳೆತ್ತರದ ಗಿಡಗಳು ಬೆಳೆದು ಮಕ್ಕಳು ಓಡಾಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ದಿನ ಕಳೆದರೆ ಹೊಸ ಕಟ್ಟಡ ಶಿಥಿಲಾವಸ್ಥೆ ತಲುಪುದರಲ್ಲಿ ಅನುಮಾನವೇ ಇಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕಾಮಗಾರಿ ಮುಗಿದು ಸುಮಾರು ದಿನಗಳು ಕಳೆದಿವೆ. ಶೀಘ್ರವೇ ಕಟ್ಟಡ ಉದ್ಘಾಟಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರೂ ಅಂಗನವಾಡಿ ಕೇಂದ್ರ ತೆರೆದಿಲ್ಲ. ಯಾವ ಕಾರಣಕ್ಕಾಗಿ ಉದ್ಘಾಟನೆ ಮುಂದೂಡಲಾಗುತ್ತಿದೆ ಎಂಬುದೂ ತಿಳಿಯುತ್ತಿಲ್ಲ” ಎಂದು ಊರಿನ ಜನರು ಮಾತನಾಡುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ರಾಜಕೀಯ ಹಿತಾಸಕ್ತಿಯಿಂದ ಅಂಗನವಾಡಿ ಕೇಂದ್ರ ಉದ್ಘಾಟಿಸದೆ ಮಕ್ಕಳ ಭವಿಷ್ಯವನ್ನು ಹಾಳು ಮಾಡುವುದು ಸರಿಯಲ್ಲ. ₹7 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡವನ್ನು ಉಪಯೋಗಿಸದೇ
ಹಾಳು ಮಾಡುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
“ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದರೂ ಅದನ್ನು ಬಳಸದೆ ಕಟ್ಟಡದಲ್ಲಿ ಬಿರುಕು ಬಿಟ್ಟಿದೆ. ಅಂಗನವಾಡಿ ಮುಂಭಾಗ ದೊಡ್ಡ ನೀರಿನ ತೊಟ್ಟಿ ಇದೆ. ಶೌಚಾಲಯದ ಸ್ಥಿತಿಗತಿ ಅರಿಯಲು ಪ್ರಯತ್ನಿಸಿದರೂ ಮುಖ್ಯ ಕಟ್ಟಡಕ್ಕೆ ಬೀಗ ಜಡಿದಿದ್ದರಿಂದ ಒಳಗೆ ಹೋಗಲು ಸಾಧ್ಯವಾಗಿಲ್ಲ” ಎಂದು ಗ್ರಾಮಸ್ಥರು ದೂರಿದ್ದಾರೆ..
ಸ್ಥಳೀಯ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ ಈ ದಿನ.ಕಾಮ್ ಜೊತೆ ಮಾತನಾಡಿ, “2014-15 ರಿಂದ ಈವರೆಗೂ ಅಂಗನವಾಡಿ ಉದ್ಘಾಟನೆ ಭಾಗ್ಯ ಕಂಡಿಲ್ಲದಿರುವುದು ಅಕ್ಷಮ್ಯ ಅಪರಾಧ. ಶಾಸಕರು ಹಾಗೂ ಜನಪ್ರತಿನಿಧಿಗಳು ಕಮಿಷನ್ ದಂಧೆಗೆ ಬಿದ್ದು ಇಂತಹ ಕಟ್ಟಡಗಳು ಹಾಳುಗುತ್ತಿವೆ. ಕೆಲವು ಕಡೆ ಅಂಗನವಾಡಿ ಕಟ್ಟಡ ಇಲ್ಲದಿರುವುದು ಸಮಸ್ಯೆಯಾಗಿದ್ದರೆ, ಇಲ್ಲಿ ಕಟ್ಟದವಿದ್ದರೂ ಬಳಸದೇ ಇರುವುದು ದುರಂತ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಶಾಸಕರು ಚುನಾವಣೆ ಸಮಯದಲ್ಲಿ ಮಾತ್ರ ಹಳ್ಳಿ ಕಡೆಗೆ ಪ್ರಯಾಣ ಮಾಡುತ್ತಾರೆ. ಸಾಮಾನ್ಯ ಜನರಿಗೆ ಆಶ್ವಾಸನೆ ಕೊಟ್ಟು ಈಗ ತಮ್ಮ ಜೇಬು ತುಂಬಿಸಿ ಕೊಳ್ಳುತ್ತಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ರಾಯಚೂರು | ಕೆರೆಯಂತಾದ ಸರ್ಕಾರಿ ಉರ್ದು ಶಾಲೆಯ ಆವರಣ; ಜನಪ್ರತಿನಿಧಿಗಳ ನಿರ್ಲಕ್ಷ್ಯ
“ರೋಡಲಬಂಡ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಕೂಡ ರಾಜಕೀಯ ಮಾಡುತ್ತಾರೆ. ಊರಿನ ಜನರು ಪ್ರಶ್ನೆ ಮಾಡಿದರೆ ರಾಜಕೀಯ ತಂದು ಗೊಂದಲ ಸೃಷ್ಟಿಸುತ್ತಾರೆ. ಇದನ್ನು ಬೇಗನೆ ಪರಿಶೀಲಿಸಿಸಬೇಕು. ಈ ಕಟ್ಟಡ ಹಾಳು ಬಿದ್ದು ಬಿರುಕು ಬಿಟ್ಟಿದೆ. ಇದನ್ನು ಕೆಡವಿ ಹೊಸ ಕಟ್ಟಡ ಕಟ್ಟಬೇಕು. ಸಂಬಂಧಪಟ್ಟ ಇಲಾಖೆ ಗುತ್ತಿಗೆದಾರ ಹಾಗೂ ಶಾಮೀಲಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಕುರಿತು ಈ ದಿನ.ಕಾಮ್ ಪಿಡಿಒ ಅವರನ್ನು ಸಂಪರ್ಕಿಸಿದಾಗ, “ನಾನು ನೂತನವಾಗಿ ನೇಮಕವಾಗಿದ್ದನೆ. ಕೆಲವು ದಿನಗಳಲ್ಲಿ ಗ್ರಾಮಸಭೆ ಕರೆದು ವಿಚಾರಿಸಲಾಗುವುದು” ಎಂದು ಪ್ರತಿಕ್ರಿಯಿಸಿದರು.