ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ನಡೆದಿರುವ ದಾಳಿ ಹಾಗೂ ತನಿಖಾ ಸಂಸ್ಥೆಗಳ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ರಾತ್ರಿ ವೇಳೆ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಹತ್ತಾರು ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜಕೀಯವಾಗಿ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ದುರುಪಯೋಗಪಡಿಸಕೊಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅನಂತ ನಾಯ್ಕ್, ದೇಶದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಳಿಗಳು ಹೆಚ್ಚಾಗಿ ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡು ನಡೆಯುತ್ತಿವೆ. ಅಂಕಿ-ಅಂಶಗಳ ಪ್ರಕಾರ 196 ಕಾಂಗ್ರೆಸ್ ರಾಜಕೀಯ ಮುಖಂಡರ ಮೇಲೆ ಇಡಿ ದಾಳಿ ನಡೆದಿದ್ದು, ತನಿಖಾ ಸಂಸ್ಥೆಗಳಾದ ಇಡಿ ಹಾಗೂ ಸಿಬಿಐಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ದೂರಿದರು.
ತನಿಖಾ ಸಂಸ್ಥೆಗಳ ದಾಳಿಗಳ ಮೂಲಕ ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ದುರ್ಬಲಗೊಳಿಸುವ ಕುತಂತ್ರ ನಡೆಯುತ್ತಿದೆ. ಇಂತಹ ದಾಳಿಗಳಿಂದ ಸತೀಶ ಜಾರಕಿಹೊಳಿ ಅವರನ್ನು ಕುಗ್ಗಿಸಲು ಸಾಧ್ಯವಿಲ್ಲ. ಇಡೀ ರಾಜ್ಯದ ಜನತೆ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವೈದ್ಯಕೀಯ ವಿದ್ಯಾರ್ಥಿಗಳು, ಯುವಕ-ಯುವತಿಯರನ್ನು ಬ್ಲ್ಯಾಕ್‌ಮೇಲ್ ಆರೋಪ: ಮೂವರು ಬಂಧನ
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಮಹ್ಮದ್ ಶಾಲಂ, ಕೆ ಕುಮಾರ್, ಮೇಷಕ್ ದೊಡ್ಮನಿ, ಇನ್ನಿತರರು ಇದ್ದರು.





