ಭಟ್ಕಳ: ಅನಾರೋಗ್ಯದಿಂದ ಮೃತಪಟ್ಟ ಆಂಧ್ರಪ್ರದೇಶ ಮೂಲದ ಅಂಗವಿಕಲ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಆಗಮಿಸದ ಹಿನ್ನೆಲೆಯಲ್ಲಿ ಸಮಾಜ ಸೇವಕರು ಹಾಗೂ ಸ್ಥಳೀಯರು ಮುಂದೆ ಬಂದು ಅಂತಿಮ ವಿಧಿವಿಧಾನ ನೆರವೇರಿಸಿದ ಘಟನೆ ನಡೆದಿದೆ.
ಆಂಧ್ರಪ್ರದೇಶದ ವೆಲಗೂಡು ನಿವಾಸಿ ದೊದೆಕೊಲಾ ಬುಕಾರಿ (56) ಮೃತ ವ್ಯಕ್ತಿ. ಎರಡೂ ಕಾಲುಗಳ ಶಕ್ತಿ ಕಳೆದುಕೊಂಡಿದ್ದ ಅವರು ವೀಲ್‌ಚೇರ್ ಸಹಾಯದಿಂದ ಭಟ್ಕಳ ನಗರ ಹಾಗೂ ರೈಲು ನಿಲ್ದಾಣದ ಸುತ್ತಮುತ್ತ ಭಿಕ್ಷಾಟನೆ ನಡೆಸುತ್ತ ಜೀವನ ನಡೆಸುತ್ತಿದ್ದರು. ಭಿಕ್ಷಾಟನೆಯಿಂದ ಬಂದ ಆದಾಯದ ಜೊತೆಗೆ ಆಂಧ್ರಪ್ರದೇಶ ಸರ್ಕಾರದಿಂದ ದೊರೆಯುತ್ತಿದ್ದ ಅಂಗವಿಕಲ ಮಾಸಾಶನವನ್ನೂ ಕುಟುಂಬಕ್ಕೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬುಕಾರಿ ಅವರು ಭಟ್ಕಳ ರೈಲು ನಿಲ್ದಾಣದ ಸಮೀಪದ ಅಂಗಡಿಯೊಂದರ ಕಟ್ಟೆಯ ಮೇಲೆ ಅಸ್ವಸ್ಥ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದರು. ಇದನ್ನು ಗಮನಿಸಿದ ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅವರು ಆಗಸ್ಟ್.28ರಂದು ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆ.30ರಂದು ಬುಕಾರಿ ಮೃತಪಟ್ಟರು.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ಉಪ್ಪಳೇಶ್ವರದಲ್ಲಿ ವನ್ಯಜೀವಿ ಉತ್ಪನ್ನಗಳ ಅಕ್ರಮ ಸಾಗಾಟ ಪತ್ತೆ: ಇಬ್ಬರ ಬಂಧನ
ಬಳಿಕ ಮೃತದೇಹವನ್ನು ಭಟ್ಕಳ ಶವಾಗಾರದಲ್ಲಿ ಇರಿಸಿ, ನಗರ ಠಾಣೆ ಪೊಲೀಸರು ಆಂಧ್ರಪ್ರದೇಶದಲ್ಲಿದ್ದ ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ಸಾವಿನ ವಿಷಯ ತಿಳಿಸಿದರು. ಪತ್ನಿ ಹಾಗೂ ಮಗ ಸೇರಿದಂತೆ ಕುಟುಂಬದವರಿಗೆ ಮೃತದೇಹವನ್ನು ಸ್ವೀಕರಿಸಲು ಭಟ್ಕಳಕ್ಕೆ ಬರುವಂತೆ ತಿಳಿಸಲಾಗಿತ್ತು. ಆದರೆ ಕುಟುಂಬಸ್ಥರು ಬರುವುದಾಗಿ ಹೇಳಿದರೂ ಹಲವು ದಿನಗಳಾದರೂ ಯಾರೂ ಆಗಮಿಸಲಿಲ್ಲ.
ಸುಮಾರು ಎಂಟು ದಿನಗಳ ಕಾಲ ಮೃತದೇಹ ಶವಾಗಾರದಲ್ಲಿಯೇ ಉಳಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದರು. ಪಿಎಸ್‌ಐ ಸೋಮನಾಥ ರಾಠೋಡ ಹಾಗೂ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.
ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅವರ ನೇತೃತ್ವದಲ್ಲಿ ಸ್ಥಳೀಯರಾದ ಲಕ್ಷ್ಮೀಶ ನಾಯ್ಕ, ಮೋಹನ ದೇವಾಡಿಗ, ಆಂಬ್ಯುಲೆನ್ಸ್ ಚಾಲಕ ಮಾರುತಿ ನಾಯ್ಕ ಹಾಗೂ ಪುರಸಭೆಯ ಪೌರಕಾರ್ಮಿಕರು ಸಹಕರಿಸಿ ಬುಕಾರಿ ಅವರ ಅಂತ್ಯಸಂಸ್ಕಾರ ನೆರವೇರಿಸಿದರು.
ಜೀವನದ ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ನಿಲ್ಲದೆ ಹೋದರು, ಸಾವಿನ ನಂತರವೂ ಕುಟುಂಬಸ್ಥರು ಮೃತದೇಹ ಪಡೆಯಲು ಬಾರದಿರುವುದು ಸಾರ್ವಜನಿಕರಲ್ಲಿ ಬೇಸರಕ್ಕೆ ಕಾರಣವಾಗಿದೆ. ಆದರೆ ಕುಟುಂಬದವರು ಬಾರದ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಸ್ಥಳೀಯರು ಮುಂದೆ ಬಂದು ಗೌರವಯುತ ಅಂತಿಮ ವಿದಾಯ ನೀಡಿರುವುದು ಮಾನವೀಯತೆಗೆ ಸಾಕ್ಷಿಯಾಗಿದೆ.





